ಸೋಮರಡ್ಡಿ ಅಳವಂಡಿ
ಹೌದು, ಇದು ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿಯೇ ಪಾಳುಬಿದ್ದು, ಕೊಂಪೆಯಂತಾಗಿರುವ ವಾಜಪೇಯಿ ನಗರ ಗುಂಪು ಮನೆಗಳ ಯೋಜನೆ ಕರುಣಾಜನಕ ಕತೆಯಿದು.
2012ರಲ್ಲಿ ಆಗ ಶಾಸಕರಾಗಿದ್ದ ಸಂಗಣ್ಣ ಕರಡಿ ಅವರು ಕರ್ನಾಟಕ ಸರ್ಕಾರದ ವಸತಿ ಖಾತೆ ಸಚಿವರಾಗಿದ್ದ ವಿ. ಸೋಮಣ್ಣ ಅವರ ಮೂಲಕ ವಾಜಪೇಯಿ ನಗರ ಗುಂಪು ಮನೆ ಯೋಜನೆಯಡಿಯಲ್ಲಿ 6 ಸಾವಿರ ಮನೆ ನಿರ್ಮಾಣಕ್ಕೆ, ಸೂರಿಲ್ಲದವರಿಗೆ ಹಂಚಿಕೆ ಮಾಡಬೇಕು ಎನ್ನುವ ಮಹದಾಸೆಯಿಂದ ಭೂಮಿಪೂಜೆ ನೆರವೇರಿಸಿದರು.6 ಸಾವಿರ ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡುವ ಗುರಿಯಾಗಿದ್ದರೂ ಪ್ರಾರಂಭದಲ್ಲಿ 2 ಸಾವಿರ ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ತೀರ್ಮಾನಿಸಿ, 23 ಎಕರೆ ಭೂಮಿ ಖರೀದಿಸಲಾಯಿತು. ಜಿ ಪ್ಲಸ್ ಯೋಜನೆ ಇದಾಗಿದ್ದು, ಮೊದಲ ಬಾರಿಗೆ ಮನೆಯ ಮೇಲೆ ಮನೆ ನಿರ್ಮಾಣ ಮಾಡಿ ನಿವೇಶನಗಳ ಕೊರತೆ ನೀಗಿಸಲು ಯೋಚಿಸಿ, ಅನುಷ್ಠಾನ ಮಾಡಲಾಯಿತು. ಜಿ ಪ್ಲಸ್ 1 ಆಗಿದ್ದರಿಂದ ಯಾವೊಬ್ಬ ಫಲಾನುಭವಿಯೂ ಮುಂದೆ ಬರಲಿಲ್ಲ, ಸರ್ಕಾರ ಸಹಾಯಧನ, ಬ್ಯಾಂಕ್ ಸಾಲ ಮತ್ತು ಫಲಾನುಭವಿಯ ಪಾಲಿನಲ್ಲಿ ₹2 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಯಿತು. ಅನೇಕ ಫಲಾನುಭವಿಗಳು ತಮ್ಮ ಪಾಲಿನ ₹30 ಸಾವಿರ ಪಾವತಿ ಮಾಡಿದರು. ಸರ್ಕಾರವೂ ₹9 ಕೋಟಿ ಅನುದಾನ ನೀಡಿತು. ಆದರೆ, ಬ್ಯಾಂಕ್ ಸಾಲ ದೊರೆಯದೇ ಇದ್ದಿದ್ದರಿಂದ ನಿರ್ಮಾಣ ಹಂತದಲ್ಲಿಯೇ ನನೆಗುದಿಗೆ ಬಿದ್ದಿತು.
ಯೋಜನೆ ಜಾರಿಯಾಗಿ 14 ವರ್ಷಗಳೇ ಗತಿಸಿದ್ದರೂ ಇದುವರೆಗೂ ಅಲ್ಲೊಬ್ಬ ಫಲಾನುಭವಿಯೂ ವಾಸಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೂ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸುತ್ತಿರುವುದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ದಿಕ್ಕು ತಪ್ಪಿದೆ.
ಹೀಗೆ, ಯೋಜನೆ ಬೇಜವ್ದಾರಿಯಿಂದಾಗಿ ನಿಷ್ಪ್ರಯೋಜಕವಾಗಿದ್ದು, ಇನ್ನು ಅದು ಕಾರ್ಯಗತವಾಗುವ ಯಾವುದೇ ಲಕ್ಷಣ ಇಲ್ಲ. ಕಳೆದ ಹತ್ತು-ಹನ್ನೆರಡು ವರ್ಷಗಳಿಂದಲೂ ಫಲಾನುಭವಿಗಳು ಇಂದಲ್ಲ, ನಾಳೆ ನಮಗೆ ಸೂರು ಸಿಕ್ಕೀತು ಎಂದು ಜಾತಕಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. ಈಗಂತೂ ಅಲ್ಲಿ ವಾಸಿಸಲು ಆಗದಂತಾಗಿದ್ದು, ಮೂಲಭೂತ ಸೌಕರ್ಯಗಳು ಇಲ್ಲ. ನಿವೇಶನ ಪಡೆದ ಫಲಾನುಭವಿಗಳು ಮನೆಯನ್ನು ನಿರ್ಮಾಣ ಮಾಡಿಕೊಳ್ಳೋಣ ಎಂದರೂ ಕನಿಷ್ಟ ಸೌಲಭ್ಯಗಳು ಇಲ್ಲ.