ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಉದ್ಯೋಗ ಮೇಳ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಉತ್ತಮ ವೇದಿಕೆಯಾಗಿದೆ. ಅದರ ಯಶಸ್ಸಿಗೆ ಸಂಬಂಧಿಸಿದ ಇಲಾಖೆಗಳು ಶ್ರಮಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಹಣಾ ಅಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ಆಟೋ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರತಿ ಮನೆ ಮನೆಗೂ ಈ ಕುರಿತ ಪೋಸ್ಟರ್ ತಲುಪಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲೂ ಈ ಕುರಿತಂತೆ ಪ್ರಚಾರ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳುವಂತೆ ಮನವೊಲಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಉದ್ಯೋಗ ಮೇಳದ ಮಾಹಿತಿ ಹಾಗೂ ಪೋಸ್ಟರ್ ತಲುಪಿಸಬೇಕು ಎಂದು ಸೂಚನೆ ನೀಡಿದರು.
ರಾಮನಗರ ನಗರ ಸಭೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ತಿಳಿಸಿದ ಅವರು, ಉದ್ಯೋಗ ಮೇಳ ನಡೆಯುವ ಆವರಣದ ಮಧ್ಯದಲ್ಲಿ ಸಣ್ಣ ವೇದಿಕೆಯೊಂದನ್ನು ನಿರ್ಮಿಸಬೇಕು, ಅಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಯವರು ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅನುಕೂಲವಾಗಲಿದೆ, ಆರೋಗ್ಯ ಇಲಾಖೆಯಿಂದ ಸ್ಥಳದಲ್ಲಿ ಎರಡು ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡಬೇಕು. ಸಂಜೆಗೆ ಲೈಟಿಂಗ್ ವ್ಯವಸ್ಥೆ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಆಸನಗಳು ಹಾಗೂ ಟೇಬಲ್‌ಗಳ ವ್ಯವಸ್ಥೆ ಮಾಡಲಾಗುವುದು. ಮೇಳದಲ್ಲಿ ನೇರವಾಗಿ ನೇಮಕ ಮಾಡಿಕೊಳ್ಳಬೇಕೆಂದು ಉದ್ಯೋಗಾಸಕ್ತ ಕಂಪನಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕೆಗಳು ಈ ಮೇಳದಲ್ಲಿ ಭಾಗವಹಿಸಿ ಸ್ಟಾಲ್ ಹಾಕಬೇಕೆಂದು ಕೋರಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್ ಮಾತನಾಡಿ, ಜಿಲ್ಲೆಯಲ್ಲಿ 4,707 ಅಭ್ಯರ್ಥಿಗಳು ಇದೂವರೆಗೂ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರೂ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖೆಯವರು ಸೂಚಿಸಬೇಕು ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಈ ಉದ್ಯೋಗ ಮೇಳದಲ್ಲಿ ಈಗಾಗಲೇ 171 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಅಂದಾಜು 200 ಕ್ಕೂ ಹೆಚ್ಚಿನ ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ, 20,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿರುತ್ತವೆ. ಎಲ್ಲಾ ರೀತಿಯ ವಿದ್ಯಾರ್ಹತೆಗೆ ತಕ್ಕಂತೆ ಉತ್ಪಾದನಾ ವಲಯ, ಬ್ಯಾಂಕಿಂಗ್ ಕ್ಷೇತ್ರ, ಮಾರಾಟ ವಲಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಗಾರ್ಮೆಂಟ್ಸ್, ಸೇವಾ ಮತ್ತು ಪ್ರವಾಸೋದ್ಯಮಗಳ ಕ್ಷೇತ್ರ, ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಗಳು ಲಭ್ಯವಿದೆ.
-----
ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡುತ್ತಿದ್ದು ಯಾವುದೇ ವಿದ್ಯಾರ್ಹತೆಯ 18 ವರ್ಷ ಮೇಲ್ಪಟ್ಟ ಪುರುಷ/ಮಹಿಳಾ ಅಭ್ಯರ್ಥಿಗಳು ಭಾಗವಹಿಸಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬಹುದು. https://docs.google.com/forms/d/e/1FAIpQLSc07MZrMxk3jOe8ggmCSRJe2b67VIjqDe3L05tB8I1OS14Gg/viewform ಗೂಗಲ್ ಫಾರಂ ಲಿಂಕ್ ಬಳಸಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವುದು. ನೋಂದಣಿ ಮಾಡದವರೂ ಸಹ ಮೇಳದ ದಿನದಂದು ನೇರವಾಗಿ ಹಾಜರಾಗಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.