ಶಿಥಿಲಗೊಂಡ ತೆಮ್ಮೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ

KannadaprabhaNewsNetwork |  
Published : Jun 29, 2025, 01:32 AM IST
ಫೋಟೋ 27 ಟಿಟಿಎಚ್ 01: ಶಿಥಿಲಗೊಂಡಿರುವ ತೆಮ್ಮೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ | Kannada Prabha

ಸಾರಾಂಶ

ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾರ್ಡರ ಗದ್ದೆಯಲ್ಲಿರುವ ತೆಮ್ಮೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ತೈರೊಳ್ಳಿ ತೀವ್ರ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾರ್ಡರ ಗದ್ದೆಯಲ್ಲಿರುವ ತೆಮ್ಮೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಗೌಡ ತೈರೊಳ್ಳಿ ತೀವ್ರ ಬೇಸರ ವ್ಯಕ್ತಪಡಿಸಿದರು.

ಈ ಶಾಲೆಯಲ್ಲಿ ಒಂದರಿಂದ ಎಳನೇ ತರಗತಿವರೆಗೆ 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ಪೋಷಕರು ಆತಂಕಗೊಂಡಿದ್ದಾರೆ. ಉತ್ತಮ ಫಲಿತಾಂಶ ಗಳಿಸುತ್ತಿರುವ ಈ ಶಾಲೆಗೆ ಸುಮಾರು 70 ವರ್ಷಗಳ ಸುದೀರ್ಘ ಇತಿಹಾಸವಿದೆ. ತಮ್ಮ ಮಕ್ಕಳನ್ನು ಬೇರೆ ಕಡೆಗೆ ಕಳುಹಿಸಲಾಗದ ಕಡು ಬಡವರಾಗಿರುವುದು ಗಮನಾರ್ಹವಾಗಿದೆ. ನಮ್ಮ ಜಿಲ್ಲೆಯವರೇ ಆಗಿರುವ ಶಿಕ್ಷಣ ಸಚಿವರು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ವರಾಹಿ ಹಿನ್ನೀರು ಪ್ರದೇಶದಲ್ಲಿರುವ ಈ ಶಾಲೆಯ ಸಮಸ್ಯೆ ಕುರಿತಂತೆ ಕಳೆದ ನಾಲ್ಕು ತಿಂಗಳಿಂದ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯ್ತಿ ಮತ್ತು ಸಂಬಂಧಿಸಿದ ಎಲ್ಲರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾರೂ ಕೂಡಾ ಗಮನ ಹರಿಸಿಲ್ಲಾ. ಎಡಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ಹೆದರಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದಿನಕ್ಕೊಂದು ಕಡೆ ತರಗತಿಗಳನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.

ಶಾಲಾ ಕಟ್ಟಡದ ಮೇಲ್ಬಾಗದಲ್ಲಿ ಶೀಟಿನ ಹೊದಿಕೆ ಹಾಕಲಾಗಿದೆ. ಆದರೆ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕಟ್ಟಡದ ಚಾವಣಿಯಿಂದ ಸಿಮೆಂಟ್ ತುಂಡುಗಳು ಉದುರುತ್ತಿದೆ. ಗೋಡೆಗಳ ಮೇಲೆ ತೇವಾಂಶದಿಂದ ನೀರು ಇಳಿಯುತ್ತಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸುಣ್ಣ ಬಣ್ಣವಿಲ್ಲದ ಗೋಡೆಗಳಲ್ಲಿ ಪಾಚಿಯೂ ಬೆಳೆದಿದೆ. ಈ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಸಂಬಂಧಿಸಿದವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕಿದೆ ಎಂದೂ ಗಿರೀಶ್ ಗೌಡ ಮನವಿ ಮಾಡಿದ್ದಾರೆ.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ