ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಶ್ರೀಸಿದ್ಧಗಂಗಾ ಮಠದ ಆವರಣದಲ್ಲಿರುವ ಶ್ರೀ ಉದ್ಧಾನ ಶಿವಯೋಗಿಗಳ ಸಮುದಾಯ ಭವನದಲ್ಲಿ ಜಾನಪದ ವಿದ್ವಾಂಸ ಹಾಗೂ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕ ಎಚ್.ಎಸ್.ಸಿದ್ದಗಂಗಪ್ಪ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಜೀವನ, ಸಾಧನೆ, ಸಂದೇಶ ಕುರಿತು ಬರೆದಿರುವ ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಗಳು ಎಂಬ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಡಾ. ಶಿವಕುಮಾರ ಸ್ವಾಮೀಜಿಗಳು ಭಕ್ತರಲ್ಲಿಯೇ ದೇವರನ್ನು ಕಂಡವರು. ಧಾರ್ಮಿಕತೆಗೆ ಹೊಸ ಭಾಷ್ಯ ಬರೆದ ಇವರನ್ನು ವರ್ಣಿಸಿದರೆ, ದೇವರನ್ನು ಪರಿಚಯಿಸಿದಂತೆ ಎಂದರು.ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಗಳು ಕೃತಿಯ ಲೇಖಕ ಎಚ್.ಎಸ್.ಸಿದ್ದಗಂಗಪ್ಪ ಅವರು ಶ್ರೀಗಳನ್ನು ಹತ್ತಿರದಿಂದ ಬಲ್ಲವರು, ಹಾಗಾಗಿಯೇ ಹೆಚ್ಚು ನಿಖರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ನಾಡಿನ ಹಲವು ಗುರುಗಳನ್ನು ನೋಡಿದ್ದೇನೆ. ಯಾವ ಗುರುವರ್ಯರಿಗೂ ಶಿವಕುಮಾರ ಸ್ವಾಮೀಜಿಗಳ ಕುರಿತು ಬಂದಿರುವಷ್ಟು ಕೃತಿಗಳು ಪ್ರಕಟಗೊಂಡಿಲ್ಲ. ಹಾಗಾಗಿ ಇವರೆಲ್ಲಾ ಕೃತಿಗಳನ್ನು ಸಂಪಾದಿಸಿ, ಅವುಗಳನ್ನು ಸಣ್ಣ ಸಣ್ಣ ಪುಸ್ತಕದ ರೂಪದಲ್ಲಿ ಇಂಗ್ಲಿಷ್‌ಗೆ ಭಾ಼ಷಾಂತರಿಸುವ ಕೆಲಸ ಮಾಡಿದರೆ ಹೆಚ್ಚಿನವರಿಗೆ ಶ್ರೀಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದರು.
ಲೇಖಕರಾಗಿರುವ ಎಚ್.ಎಸ್.ಸಿದ್ದಗಂಗಪ್ಪ ಅವರು ಡಾ. ಶಿವಕುಮಾರ ಸ್ವಾಮಿಜಿಗಳ ಸಮಗ್ರ ಚಿತ್ರಣವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ಇದು ಶ್ರೀಗಳ ಬಗ್ಗೆ ಸಂಶೋಧನೆ ಕೈಗೊಳ್ಳುವವರಿಗೆ ಒಳ್ಳೆಯ ಅಕರ ಗ್ರಂಥವಾಗಲಿದೆ. ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿಗಳು ಕೃತಿ ಪುರಾಣದ ಗ್ರಂಥವಲ್ಲ. ಪ್ರಮಾಣದ ಇಂತಹ ಕೃತಿಯನ್ನು ಪ್ರತಿಯೊಬ್ಬರೂ ಕೊಂಡು ಓದುವಂತಾಗಬೇಕು ಎಂದು ಗೋ,ರು.ಚನ್ನಬಸಪ್ಪ ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಬಾಲಚಂದ್ರ ಅವರು, ಹೇಗೆ ಭಗವದ್ಗೀತೆಯನ್ನು ಇಸ್ಕಾನ್ ಸಂಸ್ಥೆಯವರು, ವಿವೇಕಾನಂದರನ್ನು ರಾಮಕೃಷ್ಣ ಮಿಷನರಿಗಳು ನಾಡಿಗೆ ಪರಿಚಯಿಸಿದ ರೀತಿ, ನಡೆದಾಡುವ ದೇವರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಗಳ ಜೀವನ, ಸಾಧನೆ ಮತ್ತು ಸಂದೇಶಗಳನ್ನು ದೇಶದ ಎಲ್ಲಾ ಭಾಷೆಗಳಲ್ಲಿಯೂ ಮುದ್ರಿಸಿ, ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲಿದೆ.ಅದರ ಮೊದಲ ಹೆಜ್ಜೆ ಇದಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೋ.ರಂ.ಬಸವರಾಜು ಅವರು ಕೃತಿಯ ಕುರಿತು ಮಾತನಾಡಿದರು. ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳು, ಗೀತಾಂಜಲಿ ಗ್ರಾಫಿಕ್ ಮಾಲೀಕರಾದ ಜಿ.ನಾಗಸುಂದರ್, ಗುತ್ತಿಗೆದಾರರಾದ ಆರ್.ಸಿ.ಪಂಪನಗೌಡರ್, ಮುದ್ರಣ್ಣನವರು, ಮರೇಗೌಡ ಸೇರಿದಂತೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.