- ಸಿಂದೋಳ, ಸಿಂದೋಗಿ ಜನರ ಅಹವಾಲು ಸ್ವೀಕರಿಸಿ ಮಲ್ಲಿಕಾರ್ಜುನ ಭರವಸೆ
ಕನ್ನಡಪ್ರಭ ವಾರ್ತೆ ಜಗಳೂರು
ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೇಮಾರಿ ಸಮುದಾಯಗಳಿಗೆ ಸ್ಥಳೀಯ ಆಡಳಿತ ಜಮೀನು ನೀಡಿದರೆ ನಿಗಮದ ವತಿಯಿಂದ ನಿವೇಶನ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೆಮಾರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಭರವಸೆ ನೀಡಿದರು.ಪಟ್ಟಣದ ಹೊಸ ಬಸ್ ನಿಲ್ದಾಣದ ಪಟ್ಟಣ ಪಂಚಾಯಿತಿ ಮಳಿಗೆಗಳಲ್ಲಿ ವಾಸ ಮಾಡುತ್ತಿರುವ ಕೊರಚ ಸಮುದಾಯ ಮತ್ತು ಅಶ್ವಥ್ ರೆಡ್ಡಿ ನಗರದ ಸಮೀಪ ಬಟ್ಟೆ ಗುಡಿಸಲಲ್ಲಿ ವಾಸ ಮಾಡುತ್ತಿರುವ ಸಿಂದೋಳ, ಸಿಂದೋಗಿ ಸಮುದಾಯ ವಾಸ ಮಾಡುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾಮಿ ಎಂಬವರು, ಸರ್ ನಾವು ೩೦ ವರ್ಷಗಳಿಂದ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಮಗೆ ನಿವೇಶನ ಇಲ್ಲ. ಖಾಸಗಿಯವರ ಜಮೀನಿನಲ್ಲಿ ಕೆಲಸ, ಬಟ್ಟೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇವೆ. ಗಾಳಿ, ಚಳಿ, ಮಳೆ, ಬಿಸಿಲು ಎನ್ನದೇ ಜೀವನ ನಡೆಸುತ್ತಿದ್ದೇವೆ. ರಾತ್ರಿವೇಳೆ ವಿಷಜಂತುಗಳ ಹಾವಳಿ ಬೇರೆ ಆಗುತ್ತಿದೆ ಎಂದರು.
ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೆಮಾರಿ ಸಮುದಾಯಗಳ ಸಂಘ ರಾಜ್ಯಾಧ್ಯಕ್ಷ ವೀರೇಶ್ ಮಾತನಾಡಿ, ರಾಜ್ಯದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಮುದಾಯದವರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಸೂರಿನ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಈಗಾಗಲೇ ಹಾವೇರಿಯಲ್ಲಿ ಸಮುದಾಯದವರಿಗೆ ₹೩೩ ಲಕ್ಷ ಅನುದಾನ ನಿಗಮದ ವ್ಯವಸ್ಥಾಪಕರು ಬಿಡುಗಡೆ ಮಾಡಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಪಟ್ಟಣ ಪಂಚಾಯಿತಿ ಆರ್.ಐ. ಮೋದಿನ್, ಆರೋಗ್ಯ ನೀರಿಕ್ಷಕ ಪ್ರಶಾಂತ್ ಮತ್ತಿತರರು ಹಾಜರಿದ್ದರು.
-೨೮ಜೆ.ಜಿ.ಎಲ್.೦೧.ಜೆಪಿಜಿ: