ಕನ್ನಡಪ್ರಭ ವಾರ್ತೆ, ಚಾಮರಾಜನಗರ
ವಿದ್ಯಾರ್ಥಿಗಳಿಗೆ ವಿದ್ಯೆಯೇ ಮುಖ್ಯವಾಗಿದೆ. ವಿದ್ಯೆ ಯಾರು ಕದಿಯಲಾಗದ ಸಂಪತ್ತು. ಹಣ, ಆಸ್ತಿಯನ್ನು ಕಳ್ಳರು ಕದ್ದೊಯ್ಯಬಲ್ಲರು. ಆದರೆ ಕಲಿತಿರುವ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಜೀವನದಲ್ಲಿ ಓದಿನ ಕಡೆ ಮಾತ್ರ ಗಮನ ನೀಡಬೇಕು. ಬಳಿಕ ಉದ್ಯೋಗ ಪಡೆಯಲು ವೃತ್ತಿ ಮಾರ್ಗದರ್ಶನ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕು. ಸಾಮಾನ್ಯಜ್ಞಾನ ಬೆಳೆಸಿಕೊಳ್ಳಬೇಕು. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಎದೆಗುಂದದೇ ಮರಳಿ ಪ್ರಯತ್ನ ಮಾಡಬೇಕು. ಉತ್ತಮ ಜೀವನ ಕಟ್ಟಿಕೊಳ್ಳಲು ಶ್ರದ್ಧೆ, ಏಕಾಗ್ರತೆ ಪ್ರಮುಖವಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉದ್ಯೋಗವಕಾಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಕಾರ್ಯಾಗಾರ ಸಹಾಯಕವಾಗಲಿದೆ. ಹಿಂದೆ ಶೈಕ್ಷಣಿಕವಾಗಿ ಈಗಿರುವಷ್ಟು ಸೌಲಭ್ಯ, ಅವಕಾಶಗಳಿರಲಿಲ್ಲ. ಈಗ ತಂತ್ರಜ್ಞಾನ ಬೆಳೆದಿದೆ. ಸಾಕಷ್ಟು ಉದ್ಯೋಗ ಅವಕಾಶ ಲಭ್ಯವಿವೆ. ಸಾಮಾನ್ಯವಾಗಿ ವಿದ್ಯಾರ್ಥಿನಿಲಯಗಳಲ್ಲಿ ಗ್ರಾಮೀಣ ಭಾಗದ ಹಾಗೂ ಕಡುಬಡತನದ ವಿದ್ಯಾರ್ಥಿಗಳೇ ಆಗಿದ್ದು, ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆಯಬೇಕು. ನಿಮ್ಮ ಚಿಂತನೆ, ಆಲೋಚನೆಗಳೇ ನಿಮ್ಮ ವ್ಯಕ್ತಿತ್ವವನ್ನು ರೂಪಿಸಲಿವೆ. ಮೊದಲು ನಿಮ್ಮಲ್ಲಿರುವ ಕೀಳಿರಿಮೆಯ ಮನಸ್ಥಿತಿ ಬಿಡಬೇಕು ಎಂದು ಹೇಳಿದರು.ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ದೀಪಗಳಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇಂದಿನ ವಿದ್ಯಾರ್ಥಿಗಳು ದೊಡ್ಡದೊಡ್ಡ ಕನಸು ಕಾಣಬೇಕು. ಅದನ್ನು ನನಸು ಮಾಡಿಕೊಳ್ಳಬೇಕು. ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರಗಳಲ್ಲಿನ ಸಾಧಕರ ಪರಿಶ್ರಮವನ್ನು ನಾವು ಅನುಸರಿಸಬೇಕಾಗಿದೆ. ಈ ಸಾಧನೆ, ಪರಿಶ್ರಮಗಳೇ ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯಲಿವೆ. ಗುರಿಸಾಧನೆಗಾಗಿ ನಿರಂತರ, ಕಠಿಣ ಅಭ್ಯಾಸ ಮಾಡಬೇಕು. ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕು. ಮುಖ್ಯವಾಹಿನಿಗೆ ಬರಲು ವಿದ್ಯಾರ್ಥಿಗಳು ಈಗಲೇ ಮನಸ್ಸು ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಶ್ವನಾಥ್, ತಾಲೂಕು ಅಧಿಕಾರಿ ಲಿಂಗರಾಜು, ನಗರದ ಎಸ್.ಬಿ.ಐ. ರುಡ್‌ಸೆಟ್ ನಿರ್ದೇಶಕ ರಾಕೇಶ್ ಅಕುಲ್, ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕ ಪ್ರಮೋದ್, ನಂಜನಗೂಡು ಅಂಚೆ ವಿಭಾಗದ ಪಿ.ಎಲ್.ಐ ಅಭಿವೃದ್ಧಿ ಅಧಿಕಾರಿ ಮಹದೇವಪ್ಪ, ಭೀಮನಬೀಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಂದೀಶ್, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.