ಅಭಿವೃದ್ಧಿ ಆಗಿಲ್ಲವೆಂದು ದಿನೇಶ ಶೆಟ್ಟಿ ಕೆಪಿಸಿಸಿಗೆ ಮನದಟ್ಟು

KannadaprabhaNewsNetwork |  
Published : Apr 30, 2026, 01:15 AM IST
29ಕೆಡಿವಿಜಿ1-ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿದ್ದರೂ ಶಾಸಕ ಬಿ.ಪಿ.ಹರೀಶ ವಿರುದ್ಧ ಏಕವಚನದಲ್ಲಿ ಟೀಕಿಸುತ್ತಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲವೆಂದು ಪರೋಕ್ಷವಾಗಿ ಕೆಪಿಸಿಸಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ತಿರುಗೇಟು ನೀಡಿದ್ದಾರೆ.

- ಹರಿಹರ ಶಾಸಕರನ್ನು ದೂಡಾ ಅಧ್ಯಕ್ಷರು ಟೀಕಿಸುತ್ತಲೇ ಸಚಿವರ ವೈಫಲ್ಯದ ಅನಾವರಣ: ದೊಗ್ಗಳ್ಳಿ ವೀರೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿದ್ದರೂ ಶಾಸಕ ಬಿ.ಪಿ.ಹರೀಶ ವಿರುದ್ಧ ಏಕವಚನದಲ್ಲಿ ಟೀಕಿಸುತ್ತಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲವೆಂದು ಪರೋಕ್ಷವಾಗಿ ಕೆಪಿಸಿಸಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಹರಿಹರ ಶಾಸಕ ಬಿ.ಪಿ. ಹರೀಶ ಅವರನ್ನು ಟೀಕಿಸಿ, ಜಿಲ್ಲಾ ಸಚಿವರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಹರಿಹರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲವೆಂದು ಕೆಪಿಸಿಸಿ ಮನದಟ್ಟು ಮಾಡಿಕೊಡುವ ಕೆಲಸವನ್ನೂ ದೂಡಾ ಅಧ್ಯಕ್ಷರು ಮಾಡುವ ಮೂಲಕ ಸಚಿವರಿಗೂ ಸಂಕಷ್ಟ ತರುತ್ತಿದ್ದಾರೆ ಎಂದರು.

ದೂಡಾ ಅಧ್ಯಕ್ಷ ಸ್ಥಾನದ ಆಫರನ್ನು ಯಾರಿಗೋ ನೀಡಿರುವುದು ಗೊತ್ತಾಗಿ, ತಾವು ರಾಜೀನಾಮೆ ಕೊಡಬೇಕಾದ ಸ್ಥಿತಿಯಲ್ಲಿ ದಿನೇಶ ಶೆಟ್ಟಿ ಕುರ್ಚಿ ಉಳಿಸಿಕೊಳ್ಳಲು ಹರಿಹರ ಶಾಸಕರ ವಿರುದ್ಧ ಟೀಕಿಸುತ್ತಿದ್ದಾರೆ. ರಾಜಕಾರಣ ಹೊರತುಪಡಿಸಿ, ಸಂಸ್ಕಾರ, ಸಂಸ್ಕೃತಿಯನ್ನೂ ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಿಯಲಿ. ಶಾಸಕರಿಗೆ ಏಕವಚನ ಬಳಸುವುದು ಸರಿಯಲ್ಲ. 3 ದಶಕದಿಂದ ರಾಜಕೀಯ ಅಧಿಕಾರ ಅನುಭವಿಸಿದ ಸಚಿವರಿಗೆ ಹರಿಹರದಲ್ಲಿ ನೀರಿನ ಸಮಸ್ಯೆ ಇದೆ, ನೀರಿಗೆ ಹಾಹಾಕಾರ ಇದೆ. ಅದನ್ನು ಪರಿಹರಿಸಬೇಕೆಂಬುದನ್ನು ದಿನೇಶ ಕೆ.ಶೆಟ್ಟಿ ಯಾಕೆ ಗಮನಕ್ಕೆ ತಂದಿಲ್ಲ ಎಂದು ಅವರು ಪ್ರಶ್ನಿಸಿದರು.

ಹರಿಹರಕ್ಕೆ ಸರ್ಕಾರಿ ಪದವಿ ಕಾಲೇಜು, ಐಟಿಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣ, ಅಮರಾವತಿ ಬಳಿ ಫ್ಲೈಓವರ್‌, ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿ.ಪಿ.ಹರೀಶ ಮಾಡಿದ್ದಾರೆ. ಇದನ್ನೆಲ್ಲಾ ಮೊದಲು ದಿನೇಶ ಕೆ. ಶೆಟ್ಟಿ ಅರ್ಥ ಮಾಡಿಕೊಳ್ಳಬೇಕು. ದಾವಣಗೆರೆ ಜರ್ಮನ್ ಮಾದರಿ ವೃತ್ತವೆಂದು ಏನು ಮಾಡಲು ಹೊರಟಿದ್ದಾರೆ ಎಂಬುದಕ್ಕೂ ದಿನೇಶ ಕೆ. ಶೆಟ್ಟಿ ಉತ್ತರ ನೀಡಲಿ ಎಂದು ಹೇಳಿದರು.

ಜರ್ಮನ್ ಮಾದರಿಯೆಂದರೆ ಅದು ಆ ದೇಶದ ಹವಾಗುಣ, ವಾಹನದಟ್ಟಣೆ, ಜನದಟ್ಟಣೆಗೆ ಅನುಗುಣವಾಗಿ ರಸ್ತೆ, ವೃತ್ತ ನಿರ್ಮಾಣ ಮಾಡಿರುತ್ತಾರೆ. ದಾವಣಗೆರೆಯಂತ ಊರಿನಲ್ಲಿ ಜರ್ಮನ್ ಮಾದರಿ ಎಂಬುದಾಗಿ ಕಲ್ಲು ಚಪ್ಪಡಿಯ ವೃತ್ತಗಳನ್ನು ನಿರ್ಮಿಸುವ ಮೂಲಕ ಲೂಟಿ ಸಂಸ್ಕೃತಿಯನ್ನು ಮುಂದುವರಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿನ ಡಾ. ಎಂ.ಸಿ. ಮೋದಿ ವೃತ್ತದಲ್ಲಿದ್ದ ಫುಟ್‌ಬಾಲ್ ಮಾದರಿ ತೆರವುಗೊಳಿಸುವ ಬದಲು, ದುರಸ್ತಿ, ನಿರ್ವಹಣೆ ಮಾಡಿದ್ದರೆ ಸಾಕಿತ್ತು. ಆದರೆ, ಅದನ್ನೆಲ್ಲಾ ತೆರವು ಮಾಡಿ, ಏನು ಸಾಧಿಸಲು ಹೊರಟಿದ್ದಾರೆ ಎಂದು ದೊಗ್ಗಳ್ಳಿ ವೀರೇಶ ಕಿಡಿಕಾರಿದರು.

ದೂಡಾ ಮಾಜಿ ಅಧ್ಕಕ್ಷ ಎ.ವೈ.ಪ್ರಕಾಶ ಮಾತನಾಡಿ, ದಾವಣಗೆರೆಯಲ್ಲಿ ವಿವಿಧ ಬಡಾವಣೆಗಳಲ್ಲಿ ಬಫರ್ ಝೋನ್, ಸಿಎ ಸೈಟ್ ಸೇರಿದಂತೆ ಸರ್ಕಾರಿ ಜಮೀನಿಗೆ ಅಕ್ರಮವಾಗಿ ಡೋರ್ ನಂಬರ್ ನೀಡಿ, ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಆವರಗೆರೆ ರಿ.ಸ.ನಂ. ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದೆ. ಹಿಂದೆ ಪಾಲಿಕೆಯಲ್ಲಿ ಈ ಬಗ್ಗೆ ಬಿಜೆಪಿ ಧ್ವನಿ ಎತ್ತಿದ್ದು, ಅಂತಹವುಗಳಿಗೆ ಕಾಂಗ್ರೆಸ್‌ನವರು ಮೊದಲು ಕಡಿವಾಣ ಹಾಕಲಿ ಎಂದರು.

ಮಾಜಿ ಮೇಯರ್ ಕೆ.ಆರ್. ವಸಂತಕುಮಾರ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಇನ್ನೂ ಹಲವಾರು ಹೊಸ ಬಡಾವಣೆ, ಹಳೆ ಪ್ರದೇಶ ಮೂಲ ಸೌಕರ್ಯ ವಂಚಿತವಾಗಿವೆ. ಅಂತಹ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಬದಲಿಗೆ, ಸುಸ್ಥಿತಿಯಲ್ಲಿದ್ದ ಕಾಂಕ್ರಿಟ್ ವೃತ್ತ, ಫುಟ್‌ಬಾಲ್‌ ಮಾದರಿ ವೃತ್ತವನ್ನು ತೆರವು ಮಾಡಿ, ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ. ಅದೇ ಅನುದಾನ ವಿವಿಧ ಭಾಗಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಿತ್ತು ಎಂದು ಹೇಳಿದರು.

ಮುಖಂಡರಾದ ಅಣಬೇರು ಜೀವನಮೂರ್ತಿ, ಜಗಳೂರು ಕಾಡಪ್ಪನವರ್, ಎಂ.ಎನ್. ಮಂಜುನಾಥ ಇತರರು ಇದ್ದರು.

- - -

(ಕೋಟ್‌)ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕಾಂಗ್ರೆಸ್ಸಿಗರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆಯಂತಿವೆ. ಇಂತಹವರ ಹೇಳಿಕೆಗಳೇ ಹಾಸ್ಯಾಸ್ಪದ ಎನ್ನುವಂತಿರುತ್ತವೆ. ಜಿಲ್ಲಾ ಸಚಿವರು ಎಷ್ಟು ಸಲ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ ಪ್ರವಾಸ ಮಾಡಿದ್ದಾರೆ ಎಂಬುದನ್ನು ದಿನೇಶ ಕೆ. ಶೆಟ್ಟಿ ಬಹಿರಂಗಪಡಿಸಲಿ. ನಿಮ್ಮ ನಾಯಕರು ಬರೀ ದಾವಣಗೆರೆಗೆ ಮಾತ್ರ ಸಚಿವರಲ್ಲ. ಇಡೀ ಜಿಲ್ಲೆಗೆ ಉಸ್ತುವಾರಿ ಸಚಿವರೆಂಬುದನ್ನು ಮನವರಿಕೆ ಮಾಡಿಕೊಡಿ. - ದೊಗ್ಗಳ್ಳಿ ವೀರೇಶ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ.

- - -

(ಟಾಪ್‌ ಕೋಟ್‌) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬರುವ ಮುನ್ನವೇ ಅಲ್ಪ ಸಂಖ್ಯಾತರ ವಿರುದ್ಧ ಕಾಂಗ್ರೆಸ್ ಪಕ್ಷದವರು ಗಧಾಪ್ರಹಾರ ನಡೆಸುತ್ತಿರುವುದನ್ನು ನೋಡಿದರೆ ಈಗಾಗಲೇ ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸುವರು.ದೊಗ್ಗಳ್ಳಿ ವೀರೇಶ, ಬಿಜೆಪಿ ಮುಖಂಡ.

- - -

-29ಕೆಡಿವಿಜಿ1:

ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರಿಗೆ ನೀರು, ಜಾನುವಾರಿಗೆ ಮೇವಿನ ಕೊರತೆಯಾದಂತೆ ಕ್ರಮವಹಿಸಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ಸೂಚನೆ
ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜಕೀಯ ಸಮರ