ತಾಲೂಕಿನ ಕಸಬಾ, ಹೊನ್ನವಳ್ಳಿ ಹೋಬಳಿ ಸೇರಿದಂತೆ ತಾಲೂಕಿನ ಬಹುಭಾಗಗಳಲ್ಲಿ ದಿಢೀರ್ ಗಾಳಿ ಜೊತೆ ಸುರಿದ ಮಳೆಗೆ ತೆಂಗು, ಅಡಿಕೆ, ಬಾಳೆ ಹಾಗೂ ದಾಳಿಂಬೆ, ಪಪ್ಪಾಯ ಬೆಳೆಗಳು ನೆಲ ಕಚ್ಚಿದ್ದು ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿರುವುದರಿಂದ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರುತಾಲೂಕಿನ ಕಸಬಾ, ಹೊನ್ನವಳ್ಳಿ ಹೋಬಳಿ ಸೇರಿದಂತೆ ತಾಲೂಕಿನ ಬಹುಭಾಗಗಳಲ್ಲಿ ದಿಢೀರ್ ಗಾಳಿ ಜೊತೆ ಸುರಿದ ಮಳೆಗೆ ತೆಂಗು, ಅಡಿಕೆ, ಬಾಳೆ ಹಾಗೂ ದಾಳಿಂಬೆ, ಪಪ್ಪಾಯ ಬೆಳೆಗಳು ನೆಲ ಕಚ್ಚಿದ್ದು ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿರುವುದರಿಂದ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ಮಂಗಳವಾರ ರಾತ್ರಿ ತಾಲೂಕಿನ ಬಹುಭಾಗಗಳಲ್ಲಿ ದಿಢೀರ್ ಗಾಳಿ ಆರಂಭವಾದ ನಂತರ ಆಲಿಕಲ್ಲು ಸಹಿತ ಮಳೆಯೂ ಪ್ರಾರಂಭವಾಗಿದೆ. ಮಳೆಗಿಂತ ಗಾಳಿಯ ಆರ್ಭಟ ಬಹಳ ಜೋರಾಗಿದ್ದರಿಂದ ರೈತರ ತೋಟಗಳಲ್ಲಿ ಬೆಳೆದು ನಿಂತಿದ್ದ ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳು ಹಾಗೂ ಮರಗಳು ಕ್ಷಣಾರ್ಧದಲ್ಲಿ ನೆಲಕಚ್ಚಿವೆ. ಬಾಳೆ ಗಿಡಗಳು ತುಂಡು ತುಂಡಾಗಿ ಬಿದ್ದದ್ದರೆ, ತೆಂಗು ಹಾಗೂ ಅಡಿಕೆ ಇತರೆ ಮರಗಳು ಮುರಿದುಕೊಂಡು ಬಿದ್ದಿವೆ. ರೈತರ ಕೈಗೆ ಸಿಗಬೇಕಿದ್ದ ಬಾಳೆ ಹಾಗೂ ತೆಂಗಿನ ಫಸಲುಗಳು ಮನಸೋ ಇಚ್ಚೆ ಭೂಮಿಗೆ ಬಿದ್ದು ಮಣ್ಣು ಪಾಲಾಗಿರುವುದರಿಂದ ರೈತರು ಹತಾಶರಾಗಿದ್ದಾರೆ. ವರ್ಷಗಟ್ಟಲೆ ನೀರು, ಗೊಬ್ಬರ ನೀಡಿ ಸಾಕಿ ಬೆಳೆಸಿರುವ ಬೆಳೆಗಳ ಫಸಲು ಇನ್ನೇನು ಕೈಗೆ ಸಿಗಲಿವೆ ಎನ್ನುವ ಸಮಯದಲ್ಲಿ ರಣಭೀಕರ ಗಾಳಿ ರೈತರ ಅನ್ನ-ಹಣ ಕಿತ್ತುಕೊಂಡು ಬೆಳೆಗಾರರಲ್ಲಿ ಸೂತಕದ ಛಾಯೆ, ಭಯ ಆವರಿಸಿದೆ.
ಪ್ರಮುಖ ರಸ್ತೆಗಳಲ್ಲಿ ದೊಡ್ಡದೊಡ್ಡ ಮರಗಳು ಮುರಿದು ತುಂಡಾಗಿ ಬಿದ್ದಿದ್ದರೆ, ಕೆಲ ಮರಗಳು ಬೇರು ಸಮೇತ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟುಮಾಡಿವೆ. ವಿದ್ಯುತ್ ಕಂಬಗಳು ಹಾಗೂ ತಂತಿಗಳು ಎಲ್ಲೆಂದರಲ್ಲಿ ಮುರಿದು-ಹರಿದು ಬಿದ್ದು ಬುಧವಾರ ಸಂಜೆಯಾದರೂ ಸಾಕಷ್ಟು ಗ್ರಾಮಗಳಲ್ಲಿ ವಿದ್ಯುತ್ ಬಾರದೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿತ್ತು.
ಒಟ್ಟಾರೆ ಭರಣೆ ಮಳೆ ಗಾಳಿಯನ್ನು ಜೊತೆಯಲ್ಲೇ ಸೃಷ್ಟಿಸಿಕೊಂಡು ಭೂಮಿಯನ್ನು ತಂಪಾಗಿಸುವುದರ ಜೊತೆ ಬಹುದೊಡ್ಡ ಆಪತ್ತನ್ನು ಸಹ ರೈತರ ಪಾಲಿಗೆ ನೀಡಿರುವುದು ಒಂದೆಡೆಯಾದರೆ, ಇಂತಹ ಕೃಷಿಯ ಸಹವಾಸ ಬೇಡವೇ ಬೇಡ ಎಂಬ ಆತಂಕವನ್ನು ರೈತರಲ್ಲಿ ಸೃಷ್ಟಿಸಿರುವುದು ಮಾತ್ರ ನಿಜ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.