ಮಂಗಳೂರು ಪಾಲಿಕೆ ಆಯುಕ್ತ ವಿರುದ್ಧ ನೇರ ಭ್ರಷ್ಟಾಚಾರ ಆರೋಪ!

KannadaprabhaNewsNetwork |  
Published : Jan 05, 2025, 01:30 AM IST
ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಆರೋಪ ಮಾಡುತ್ತಿರುವ ಸದಸ್ಯ ಅಬ್ದುಲ್‌ ರವೂಫ್‌. | Kannada Prabha

ಸಾರಾಂಶ

ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರು. ಹಣ ಇರುವುದು ಗೊತ್ತಿದ್ದೂ 160 ಕೋಟಿ ರು.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರು.ವರೆಗೆ ರಿಯಾಯ್ತಿ ಇದೆ. ಆದರೆ ಆಯುಕ್ತರು ಸದಸ್ಯರನ್ನು ಕತ್ತಲೆಯಲ್ಲಿಟ್ಟು 1 ಲಕ್ಷ ರು.ಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇ-ಟೆಂಡರ್‌ ಆದೇಶ ಮಾಡಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಅವರು ಸಾಮಾನ್ಯ ಸಭೆಯಲ್ಲೇ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದು, ಇಡೀ ಸದನ ಯಾವುದೇ ವಿರೋಧವಿಲ್ಲದೆ ಮೌನವಾಗಿ ಸಹಮತ ವ್ಯಕ್ತಪಡಿಸಿದ ಅಪರೂಪದ ಘಟನೆ ನಡೆದಿದೆ.

ಸಾಮಾನ್ಯ ಸಭೆಯ ಆರಂಭದಲ್ಲಿ ವಿವಿಧ ವಿಚಾರಗಳ ಚರ್ಚೆಯ ಬಳಿಕ ಈ ವಿಷಯವನ್ನು ಕೈಗೆತ್ತಿಕೊಂಡ ಅಬ್ದುಲ್‌ ರವೂಫ್‌, ದಾಖಲೆಗಳನ್ನು ತೋರಿಸಿ ನೇರವಾಗಿ ಆಯುಕ್ತರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಅಬ್ದುಲ್‌ ರವೂಫ್‌ ಮಾತನಾಡುತ್ತಿದ್ದರೆ, ಆಡಳಿತ ಪಕ್ಷದ ಯಾರೊಬ್ಬ ಸದಸ್ಯರೂ ಮರುಮಾತನಾಡದೆ ತಮ್ಮ ಪರೋಕ್ಷ ಒಪ್ಪಿಗೆ ಸೂಚಿಸಿದರು.

ಒಂದು ಹಂತದಲ್ಲಿ ಸ್ವತಃ ಆಯುಕ್ತರು ಸ್ಪಷ್ಟನೆ ನೀಡಲು ಮುಂದಾದರೂ, ಮೇಯರ್‌ ಅದಕ್ಕೆ ಹೆಚ್ಚಿನ ಅವಕಾಶ ನೀಡದೆ ವಿಪಕ್ಷ ಸದಸ್ಯರಿಗೆ ಮಾತು ಮುಂದುವರಿಸಲು ಸೂಚಿಸಿದ್ದು, ಇಡೀ ಸದನ ಈ ವಿಚಾರದಲ್ಲಿ ಒಗ್ಗಟ್ಟಾಗಿದೆ ಎಂಬ ಸ್ಪಷ್ಟ ಸಂದೇಶ ಸಾರಿತ್ತು.

ಆರೋಪಗಳೇನು?: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 20 ವರ್ಷಕ್ಕಿಂತಲೂ ಹಿಂದೆ ನಿರ್ಮಾಣವಾದ ಅನೇಕ ವಸತಿ, ಕಮರ್ಷಿಯಲ್‌ ಕಟ್ಟಡಗಳು ಕಾನೂನು ಪ್ರಕಾರ ನಿರ್ಮಾಣವಾಗಿಲ್ಲ ಎನ್ನುವ ಕಾರಣಕ್ಕೆ ಇಷ್ಟು ವರ್ಷ ಕಳೆದರೂ, ಹಲವು ಆಯುಕ್ತರು ಬಂದು ಹೋಗಿದ್ದರೂ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿರಲಿಲ್ಲ. ಆದರೆ ಈಗಿನ ಆಯುಕ್ತರು ಬಂದ ಬಳಿಕ ಅಂತಹ ಕಟ್ಟಡಗಳಿಗೆ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿದ್ದಾರೆ. ಯಾವ ಆಧಾರದ ಮೇಲೆ ನೀಡಿದ್ದು? ಇದು ಭ್ರಷ್ಟಾಚಾರ ಅಲ್ವಾ ಅಂತ ಅಬ್ದುಲ್‌ ರವೂಫ್‌ ಆರೋಪಿಸಿದರು.

ಇಬ್ಬರು ಎಇಇ, ಇಬ್ಬರು ಜೆಇ ಅಧಿಕಾರಿಗಳಿಗೆ 29 ದಿನ ಚಾರ್ಜ್‌ ನೀಡದೆ ಸತಾಯಿಸಿದ್ದಾರೆ, ಪಾಲಿಕೆಯಲ್ಲಿ 30 ವರ್ಷಗಳ ಅನುಭವ ಇರುವ ಜೆಇ, ಎಇಇಗಳನ್ನು ಬಿಟ್ಟು ಡೆಪ್ಯುಟೇಶನ್‌ ಮೇಲೆ ಬಂದವರಿಗೆ ಸೀನಿಯರ್‌ ಎಂಜಿನಿಯರ್‌ ಚಾರ್ಜ್‌ ನೀಡಿದ್ದಾರೆ. ಇದರಲ್ಲಿ ಯಾವ ಉದ್ದೇಶ ಇತ್ತು ಎಂದು ಪ್ರಶ್ನಿಸಿದರು.

ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರು. ಹಣ ಇರುವುದು ಗೊತ್ತಿದ್ದೂ 160 ಕೋಟಿ ರು.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರು.ವರೆಗೆ ರಿಯಾಯ್ತಿ ಇದೆ. ಆದರೆ ಆಯುಕ್ತರು ಸದಸ್ಯರನ್ನು ಕತ್ತಲೆಯಲ್ಲಿಟ್ಟು 1 ಲಕ್ಷ ರು.ಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇ-ಟೆಂಡರ್‌ ಆದೇಶ ಮಾಡಿದ್ದಾರೆ ಎಂದು ದೂರಿದರು.

ಈ ಸಂದರ್ಭ ಆಯುಕ್ತರು ‘ದಾಖಲೆ ಇದ್ದರೆ ಕೊಡಿ, ಸುಮ್ಮನೆ ಆರೋಪ ಮಾಡಬೇಡಿ’ ಎಂದು ಕೇಳಿದ್ದಕ್ಕೆ ದಾಖಲೆಗಳ ಪ್ರತಿಗಳನ್ನು ಮೇಯರ್‌ಗೆ ಅಬ್ದುಲ್ ರವೂಫ್‌ ನೀಡಿದರು. ಬಳಿಕ ಆಯುಕ್ತರು ತಮ್ಮ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಅದಕ್ಕೆ ರವೂಫ್‌ ಆಕ್ಷೇಪ ಎತ್ತಿದರು. ಕೊನೆಗೆ, ಆಯುಕ್ತರ ಬಗ್ಗೆ ಭ್ರಷ್ಟಾಚಾರ ಆರೋಪ ಬಂದಿರುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮೇಯರ್‌ ಮನೋಜ್‌ ಕೋಡಿಕಲ್‌ ತಿಳಿಸಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’