ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಶಿರಸಿಯಲ್ಲಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jan 05, 2025, 01:30 AM IST
ಪೊಟೋ೪ಎಸ್.ಆರ್.ಎಸ್೧ (ನಗರದ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.) | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ, ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಆಗ್ರಹಿಸಿ ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಶಿರಸಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ, ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳದ ವತಿಯಿಂದ ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಬಸ್ ಪ್ರಯಾಣ ದರ ಏರಿಕೆ ತಕ್ಷಣ ಕೈಬಿಡಬೇಕು. ಬಾಣಂತಿಯರ ಸರಣಿ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ಜನರಿಗೆ ಉಚಿತ ಯೋಜನೆಯ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೀಗ ಬಸ್ ಪ್ರಯಾಣ ದರ ಏರಿಕೆ ಮಾಡಿದೆ. ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಂದು ಕೈನಿಂದ ಕೊಟ್ಟು ಇನ್ನೊಂದು ಕೈನಿಂದ ಬಾಚಿಕೊಳ್ಳುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಆರ್.ಡಿ. ಹೆಗಡೆ ಜಾನ್ಮನೆ ಮಾತನಾಡಿ, ಪಕ್ಕದ ಸೀಟ್‌ನಲ್ಲಿ ಕುಳಿತ ಗಂಡನ ಕಿಸೆಯಿಂದ ದುಡ್ಡು ಕಸಿದುಕೊಂಡು ಹೆಂಡತಿಗೆ ನೀಡುತ್ತಿದೆ. ಇದೊಂದು ಗೋಲ್‌ಮಾಲ್ ಸರ್ಕಾರವಾಗಿದ್ದು, ನಷ್ಟ ಭರಣ ಮಾಡಲು ಬೇರೆಯವರ ಕಿಸೆಯಿಂದ ಹಣ ಕಸಿಯುತ್ತಿದ್ದಾರೆ. ಪ್ರಯಾಣ ದರವನ್ನು ಶೇ. ೧೫ರಷ್ಟು ಏರಿಕೆ ಮಾಡಿರುವುದನ್ನು ತಕ್ಷಣ ಕೈ ಬಿಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಶೋಷಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಗುತ್ತಿಗೆದಾರ ಸಂತೋಷ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ನೈತಿಕ ಹೊಣೆ ಹೊತ್ತು ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿ ಇನ್ನೊಂದು ಕೈನಿಂದ ಬಾಚಿಕೊಳ್ಳುವ ಕೆಲಸ ಮಾಡುತ್ತಿದೆ. ಬಾಣಂತಿಯರ ಸರಣಿ ಸಾವಿನ ಬಗ್ಗೆ ಅನುಕಂಪ ಇಲ್ಲ. ಮಹಿಳೆಯರ ಹೆಸರಿನಲ್ಲಿ ಮಂಜೂರಾದ ಮನೆಗಳಿಗೆ ಬಿಲ್ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.

ನಂದನ ಸಾಗರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಡಾ, ವಾಲ್ಮೀಕಿ ನಿಗಮ ಹಗರಣ ಭಾಗ್ಯದ ಆನಂತರ ಈಗ ಬೆಲೆ ಏರಿಕೆ ಭಾಗ್ಯ ನೀಡುತ್ತಿದೆ. ಗುತ್ತಿಗೆದಾರಿಗೆ ಹಣ ಪಾವತಿಸುತ್ತಿಲ್ಲ. ಅಲ್ಲದೇ ಹೊಸ ಕಾಮಗಾರಿಯನ್ನೂ ಮಂಜೂರಿ ಮಾಡುತ್ತಿಲ್ಲ. ಗುತ್ತಿಗೆ ಕಾಮಗಾರಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಗುತ್ತಿಗೆದಾರರು ಬೇಡುವ ಸ್ಥಿತಿಯಲ್ಲಿದ್ದಾರೆ. ಭ್ರಷ್ಟ ಕಾಂಗ್ರೆಸ್ ತೊಲಗುವ ವರೆಗೂ ಬಿಜೆಪಿಯಿಂದ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಬೆಲೆ ಏರಿಕೆಯು ಕಾಂಗ್ರೆಸ್ ಸರ್ಕಾರದ ಉಡುಗೊರೆಯಾಗಿದೆ. ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಡೆಯುತ್ತಿದ್ದು, ಹಗರಣದಲ್ಲಿ ಕಾಂಗ್ರೆಸ್ ಮುಳುಗಿದೆ. ಮುಂದಿನ ದಿನಗಳಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಶಿರಸಿ ಸಾರಿಗೆ ಸಂಸ್ಥೆಯ ಉಪ ವಿಭಾಗದಲ್ಲಿ ೧೪೮ ಮೆಕ್ಯಾನಿಕಲ್ ಕೊರತೆಯಿದೆ. ಬಸ್‌ಗೆ ಡ್ರೈವರ್ ಇಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ. ಅಧಿಕಾರಿಗಳಿಗೆ ಗೌರವ ನೀಡುವ ಸಂಸ್ಕೃತಿ ಇಲ್ಲ. ಕರ್ನಾಟಕ ಸರ್ಕಾರ ಔರಂಗಜೇಬನ ಸಾಮ್ರಾಜ್ಯವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ಪ್ರತಿಭಟನೆಯಲ್ಲಿ ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಪ್ರಮುಖರಾದ ನಾಗರಾಜ ನಾಯ್ಕ, ವೀಣಾ ಶೆಟ್ಟಿ, ಗಣಪತಿ ನಾಯ್ಕ, ರವಿ ಶೆಟ್ಟಿ, ಶ್ರೀರಾಮ ನಾಯ್ಕ, ಮೇಘನಾ ಶಾಸ್ತ್ರೀ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ