ಬೇಸಿಗೆ ಬೆಳೆಗೇ ಭದ್ರಾ ಡ್ಯಾಂ ನೀರೊಗಿಸಲು ತಾಕೀತು

KannadaprabhaNewsNetwork |  
Published : Aug 18, 2026, 01:30 AM IST
17ಕೆಡಿವಿಜಿ7-ದಾವಣಗೆರೆಯಲ್ಲಿ ಸೋಮವಾರ ಭದ್ರಾ ನಾಲೆ ಕೊನೆಯ ಭಾಗದ ರೈತರ ಹೋರಾಟ ಸಮಿತಿ ಮುಖಂಡ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ.ಮಹಾಬಲೇಶ್ವರಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾ ಡ್ಯಾಂನಿಂದ ಯಾವುದೇ ಒತ್ತಡಕ್ಕೆ ಮಣಿದು ನಾಲೆಗಳಿಗೆ ಈಗ ನೀರು ಹರಿಸಿದರೆ ಕೆರೆ, ಹಳ್ಳ, ಕೊಳ್ಳದ ಪಾಲಾಗಿ ವ್ಯರ್ಥವಾಗುವ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಸತತವಾಗಿ 120 ರಿಂದ 135 ದಿನ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಭದ್ರಾ ನಾಲೆ ಕೊನೆಯ ಭಾಗದ ರೈತರ ಹೋರಾಟ ಸಮಿತಿ ಮುಖಂಡ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಮೇಗಳಗೆರೆ ಹಿರಿಯ ರೈತ ಪಿ.ಮಹಾಬಲೇಶ್ವರ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಸದ್ಯಕ್ಕೆ ಯಾವುದೇ ಕಾರಣಕ್ಕೂ ನೀರು ಬಿಡಬೇಡಿ: ಪಿ.ಮಹಾಬಲೇಶ್ವರ ಗೌಡ ಒತ್ತಾಯ । ಉಗ್ರ ಹೋರಾಟಕ್ಕೂ ಸಿದ್ಧ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಯಾವುದೇ ಒತ್ತಡಕ್ಕೆ ಮಣಿದು ನಾಲೆಗಳಿಗೆ ಈಗ ನೀರು ಹರಿಸಿದರೆ ಕೆರೆ, ಹಳ್ಳ, ಕೊಳ್ಳದ ಪಾಲಾಗಿ ವ್ಯರ್ಥವಾಗುವ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಸತತವಾಗಿ 120 ರಿಂದ 135 ದಿನ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಭದ್ರಾ ನಾಲೆ ಕೊನೆಯ ಭಾಗದ ರೈತರ ಹೋರಾಟ ಸಮಿತಿ ಮುಖಂಡ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಮೇಗಳಗೆರೆ ಹಿರಿಯ ರೈತ ಪಿ.ಮಹಾಬಲೇಶ್ವರ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಪರ್ ಎಲ್‌ ನಿನೋ ಕಾರಣಕ್ಕೆ 145 ವರ್ಷಗಳ ಇತಿಹಾಸದಲ್ಲೇ ಇಷ್ಟೊಂದು ಕಡಿಮೆ ಮಳೆಯಾಗಿರಲಿಲ್ಲ. ಡ್ಯಾಂ ನೀರು ಅವಲಂಬಿತ ಬೆಳೆಗಳನ್ನು ಬೆಳೆಯದಂತೆ ಸಿಎಂ ಡಿ.ಕೆ.ಶಿವಕುಮಾರ ಮನವಿ ಮಾಡಿದ್ದರಿಂದ ಶೇ.90ರಷ್ಟು ಪ್ರದೇಶದಲ್ಲಿ ರೈತರು ಬತ್ತ ಸಸಿ ಮಡಿ ಮಾಡಿಕೊಂಡಿಲ್ಲ. ಈಗ ನಾಲೆಗೆ ನೀರು ಹರಿಸಿದರೆ ಅನುಕೂಲ ಆಗುವುದಿಲ್ಲ. ಹಾಗಾಗಿ ಸದ್ಯಕ್ಕೆ ನಾಲೆಗೆ ನೀರು ಹರಿಸುವುದು ಬೇಡ. ಇದು ಕೊನೆಯ ಭಾಗದ ರೈತರ ಒಕ್ಕೊರಲ ಒತ್ತಾಯ ಎಂದರು.

ಮಳೆ ಕೈಕೊಟ್ಟಿದ್ದರಿಂದ ಡ್ಯಾಂಗಳಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ರೈತರು ಡ್ಯಾಂ ನೀರು ಅವಲಂಭಿಸಿ, ನೀರಾವರಿ ಬೆಳೆಯದಂತೆ ಸರ್ಕಾರ ಸೂಚಿಸಿತ್ತು. ಆಗಸ್ಟ್‌ನಲ್ಲಿ ಒಂದಿಷ್ಟು ಮಳೆಯಾಗಿದೆ. ಭದ್ರಾ ಡ್ಯಾಂ 71.500 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ ಬರೀ 56.69 ಟಿಎಂಸಿ ನೀರು ಮಾತ್ರ ಇದೆ. ಇದರಲ್ಲಿ ಕುಡಿಯುವ ನೀರಿಗೆಂದು 8.5 ಟಿಎಂಸಿ, ಡೆಡ್ ಸ್ಟೋರೇಜ್‌ 13.8 ಟಿಎಂಸಿ, ಆವಿಯಾಗಲು 6 ಟಿಎಂಸಿ ಎಂಬುಾಗಿ ತೆಗೆದರೂ, ನೀರಿನ ಕೊರತೆ ಸ್ಪಷ್ಟವಾಗಿದೆ. ಈಗ ನೀರು ಕೊಟ್ಟರೆ ಬತ್ತ, ಕಬ್ಬು, ಅಡಕೆ, ತೋಟದ ಬೆಳೆಗೆ, ಜನ- ಜಾನುವಾರುಗಳಿಗೆ ಬೇಸಿಗೆ ಕಾಲದಲ್ಲಿ ಅಪಾಯ, ಸಂಕಷ್ಟ ತಪ್ಪಿದ್ದಲ್ಲ ಎಂದು ಸೂಚ್ಯವಾಗಿ ಹೇಳಿದರು.

ಭದ್ರಾ ನಾಲೆಗೆ ಈಗ ನೀರು ಬಿಟ್ಟರೆ ಯಾವುದೇ ಸದುಪಯೋಗ ಆಗದು. ಹಾಗಾಗಿ, ಭಾರತೀಯ ರೈತ ಒಕ್ಕೂಟದ ಮುಖಂಡರು ಅಚ್ಚುಕಟ್ಟು ಕೊನೆ ಭಾಗದ ರೈತರ ಅಭಿಪ್ರಾಯ ಸಂಗ್ರಹಿಸಿದ ನಂತರ ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸಬೇಕೋ ಅಥವಾ ಬೇಡವೋ ಅಂತಾ ತೀರ್ಮಾನಿಸಲಿ. ಭದ್ರಾ ಕಾಡಾ ಕಚೇರಿಯಲ್ಲಿ ಆ.18ರಂದು ನಡೆಯುವ ಐಸಿಸಿ ಸಭೆಯಲ್ಲಿ ನಾಲೆಗೆ ನೀರು ಹರಿಸುವ ತೀರ್ಮಾನ ಕೈಗೊಂಡರೆ ದಾವಣಗೆರೆ ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದು ನಿಶ್ಚಿತ ಎಂದು ಎಚ್ಚರಿಸಿದರು.

ನಾಲೆಗೆ ನೀರು ಹರಿಸದೇ ಇರುವುದರ ಹಿಂದೆ ಅಡಿಕೆ ಲಾಬಿಯೆಂದು ಕೆಲವರು ಹೇಳುತ್ತಾರೆ. ಇದರಲ್ಲಿ ಯಾವುದೇ ಲಾಬಿಯೂ ಇಲ್ಲ. ಭಾರತೀಯ ರೈತ ಒಕ್ಕೂಟವು ಕೇವಲ ಬತ್ತವನ್ನಷ್ಟೇ ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡುವುದು ಸರಿಯಲ್ಲ. ಈಗ ನೀರು ಹರಿಸಿದರೆ ಬೇಸಿಗೆಯಲ್ಲಿ ಅತೀ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈಗ ನೀರು ಬಿಡಬಾರದು ಎಂದು ಅವರು ಪುನರುಚ್ಛರಿಸಿದರು.

ಭದ್ರಾ ನಾಲೆಗೆ ಈಗ ನೀರು ಬಿಟ್ಟರೂ ಬತ್ತ ಶೇ.5ರಿಂದ 10ರಷ್ಟು ಮಾತ್ರ ಇಳುವರಿ ಬರುತ್ತದೆ. ಅದೇ ಈಗ ನೀರು ಬಿಡದೇ, ಬೇಸಿಗೆ ಬೆಳೆಗೆ 120-130 ದಿನ ನೀರು ಬಿಟ್ಟರೆ, ಬತ್ತ ಇಳುವರಿ ಉತ್ತಮವಾಗಿ 40-45 ಚೀಲ ಬರುತ್ತದೆ. ಅಡಕೆ ಬೆಳೆಗಾರ ರೈತರ ಪ್ರಶ್ನೆ ಇದೆಂದರೂ ಭದ್ರಾ ನಾಲೆಯ ಆರಂಭದ ತರೀಕೆರೆಯಿಂದ ಹರಪನಹಳ್ಳಿ ಭಾಗದ ಕೊನೆಯ ಭಾಗದವರೆಗೂ ಅಡಿಕೆ ಬೆಳೆಗಾರರಿದ್ದಾರೆ. ಕಬ್ಬು, ಬತ್ತ, ಅಡಿಕೆ ಇತರೆ ತೋಟದ ಬೆಳೆಗೆ 56 ಟಿಎಂಸಿ ಬಳಸಿದರೆ, 25ರಿಂದ 28 ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಡ್ಯಾಂನ ಎಲ್ಲ ಗೇಟ್‌ನಲ್ಲೂ ನೀರು ಸೋರಿಕೆ ಇದೆ. ಈಗ ಅಚ್ಚುಕಟ್ಟಿನಲ್ಲಿ ಬಹುತೇಕ ರೈತರು ಬತ್ತದ ಸಸಿ ಮಡಿ ಸಹ ಮಾಡಿಲ್ಲ ಎಂದು ಅವರು ಹೇಳಿದರು.

ಭದ್ರಾ ಡ್ಯಾಂಗೆ ತುಂಗಾದಿಂದ 17.5 ಟಿಎಂಸಿ ನೀರು ಲಿಫ್ಟ್ ಮಾಡಿದ ನಂತರವೇ ಭದ್ರಾ ಮೇಲ್ದಂಡೆಗೆ ನೀರು ಕೊಡಿ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಒಂದು ವೇಳೆ 56 ಟಿಎಂಸಿನಲ್ಲಿ ಮೇಲ್ದಂಡೆಗೆ ನೀರು ಕೊಟ್ಟರೆ, ದಾವಣಗೆರೆಗಿಂತ ಮೇಲ್ಭಾಗದ 15 ಕಿಮೀ ಹಿಂದಿನವರಿಗೆ ನೀರೇ ಬರುವುದಿಲ್ಲ. ಇನ್ನು ಕೊನೆ ಭಾಗಕ್ಕೆ ನೀರು ಕನಸಷ್ಟೇ. ಭದ್ರಾ ಕಾಡಾದ ಐಸಿಸಿ ಸಭೆಯಲ್ಲಿ ಅಚ್ಚುಕಟ್ಟು ಕೊನೆ ಭಾಗದ ರೈತರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಒಕ್ಕೊರಲ ನಿರ್ಣಯ ಕೈಗೊಳ್ಳಬೇಕು. ತುಂಗಾದಿಂದ ನೀರೆತ್ತಿ, ಭದ್ರಾಗೆ ಹರಿಸದೇ, ಮೇಲ್ದಂಡೆಗೆ ಕೊಟ್ಟರೆ ತೀವ್ರ ಹೋರಾಟ ನಿಶ್ಚಿತ ಎಂದು ಮಹಾಬಲೇಶ್ವರ ಗೌಡ ಎಚ್ಚರಿಸಿದರು.

ಸಮಿತಿ ಮುಖಂಡರಾದ ಬೇತೂರು ಸಂಗನಗೌಡ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಬೇತೂರು ಬಿ.ಪ್ರಭು, ಬೇತೂರು ಬಸವರಾಜಯ್ಯ, ಟಿ.ರಾಜಣ್ಣ ಬೇತೂರು, ಬಿ.ವಿರುಪಾಕ್ಷಪ್ಪ, ಡಾ.ನಾಗಭೂಷಣ, ಎಚ್.ವಿ.ಕರಿಬಸಪ್ಪ ಬೇತೂರು, ಎಚ್.ಬಸಪ್ಪ ಹಳ್ಳಿಕೇರಿ, ಬೇತೂರು ಬಿ.ಜಿ.ಬಸವರಾಜ, ರಮೇಶ ಎಲಿಗಾರ್ ಇತರರು ಇದ್ದರು.

- - -

(ಕೋಟ್‌) ಭಾರತೀಯ ರೈತ ಒಕ್ಕೂಟ ಅಸ್ತಿತ್ವದಲ್ಲಿದೆಯೇ ಎಂಬುದೇ ಪ್ರಶ್ನೆ. ಕಬ್ಬು ಬೆಳೆಗಾರರು ಸೇರಿ ಹುಟ್ಟು ಹಾಕಿದ್ದು. ಒಕ್ಕೂಟದ ಪ್ರೊ. ಸಿ.ನರಸಿಂಹಪ್ಪ, ಎಸ್.ಎ. ರವೀಂದ್ರನಾಥ ಬಂದರೆ ಅಚ್ಚುಕಟ್ಟು ಕೊನೆ ಭಾಗಕ್ಕೆ ಕರೆದೊಯ್ದು, ರೈತರ ಪರಿಸ್ಥಿತಿ ತೋರಿಸುತ್ತೇವೆ. ಇದೇ ನಾಯಕರೆ ಭದ್ರಾ ಡ್ಯಾಂನಿಂಗ ಇವಾಗಲೇ ನೀರು ಬಿಡಬೇಕಾ ಅಥವಾ ಬೇಸಿಗೆ ಬೆಳೆಗೆ ನೀರು ಕೊಡುವುದು ಸೂಕ್ತವೆಂದು ಹೇಳಲಿ. ಐಬಿ, ಸ್ಟಾರ್ ಹೋಟೆಲ್‌, ಎಸಿ ರೂಂನಲ್ಲಿ ಕುಳಿತು, ಚರ್ಚಿಸುವುದಲ್ಲ. ನಾವೆಲ್ಲರೂ ಸೇರಿ, ಅಚ್ಚುಕಟ್ಟು ಕೊನೆಯ ಭಾಗದ ರೈತರ ಪರಿಸ್ಥಿತಿ ನೋಡಿ, ಒಕ್ಕೊರಲಿನಿಂದ ನಿರ್ಣಯ ಮಾಡೋಣ.

- ಪಿ.ಮಹಾಬಲೇಶ್ವರ ಗೌಡ, ಹಿರಿಯ ರೈತ, ಮೇಗಳಗೆರೆ.

- - -

-17ಕೆಡಿವಿಜಿ7: ದಾವಣಗೆರೆಯಲ್ಲಿ ಸೋಮವಾರ ಭದ್ರಾ ನಾಲೆ ಕೊನೆಯ ಭಾಗದ ರೈತರ ಹೋರಾಟ ಸಮಿತಿ ಮುಖಂಡ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ.ಮಹಾಬಲೇಶ್ವರ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡಲ್‌ ಪಕ್ಕ...ಕಮಲನಗರದಲ್ಲಿ ಸಂಭ್ರಮದ ನಾಗರ ಪಂಚಮಿ
ದೇವೇಗೌಡರ ಮುಖ ತೋರಿಸದೇ ಗೆದ್ದು ಬನ್ನಿ