ಕನ್ನಡ ಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅಧ್ಯಕ್ಷತೆಯಲ್ಲಿ ನಡೆದ ರೈತರ ಕುಂದು ಕೊರತೆ ಆಲಿಸುವ ಸಂಬಂಧ ಸಭೆಯಲ್ಲಿ ಚಿತ್ರ ನಿರ್ಮಾಪಕ ಜೋಗಿ ಪ್ರೇಮ್ ಜಮೀನು ಕೋರಿ ಸಲ್ಲಿಸಿದ ಅರ್ಜಿಗೆ ವಿರೋಧಿಸಿದ ರೈತ ಸಂಘದ ಮುಖಂಡರು ಒಂದು ವೇಳೆ ಜಮೀನು ನೀಡಿದಲ್ಲಿ ಚಳವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊತ್ತನಹಳ್ಳಿ ಸರ್ವೇ ನಂಬರ್ 51,52 ಹಾಗೂ 53 ರಲ್ಲಿ ಗೋ ಶಾಲೆ ತೆರೆಯಲು 4 ಎಕರೆ ಜಮೀನು ನೀಡುವಂತೆ ಕೋರಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಲಿಂಗ ಹಾಗೂ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಉಮೇಶ್ ಸಭೆಯಲ್ಲಿ ಪ್ರಸ್ತಾಪ ಮಾಡಿದರು.ಈ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ಇತರ ರೈತ ಮುಖಂಡರು, ಈಗಾಗಲೇ ಆತಗೂರು ಹೋಬಳಿಯ ಹೂತಗೆರೆ ಬಳಿಗೋ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಸಾಕಾಣಿಕೆ ಮಾಡಲು ಗುರುಗಳೇ ಬರುತ್ತಿಲ್ಲ. ಹೀಗಾಗಿ ಗೋಶಾಲೆ ನಿರರ್ಥಕವಾಗಿದೆ ಎಂದು ರೈತ ಮುಖಂಡರು ಸಭೆ ಗಮನಕ್ಕೆ ತಂದರು. ಹೀಗಾಗಿ ಕೊತ್ತನಹಳ್ಳಿ ಬಳಿ ಇರುವ ಜಮೀನನ್ನು ಮನೆ ಇಲ್ಲದವರಿಗೆ ಮನೆ ನಿರ್ಮಿಸಲು ಅಥವಾ ವಿದ್ಯಾರ್ಥಿನಿಲಯ ತೆರೆಯಲು ಈ ಜಮೀನನ್ನು ಬಳಸುವಂತೆ ಸಲಹೆ ನೀಡಿದರು.
ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆ ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಗುಣ ಮಟ್ಟದ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಅವರನ್ನು ಒತ್ತಾಯಿಸಿದರು.
ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ರಾಮಲಿಂಗಯ್ಯ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ನಾರಾಯಣಿ, ನವೀನ, ಶಿರಸ್ತೇದಾರ್ ಲಕ್ಷ್ಮಿ ನರಸಿಂಹ, ನೀರಾವರಿ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.