ಕನ್ನಡಪ್ರಭ ವಾರ್ತೆ ಮಂಡ್ಯ
ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿಯ ರೈತ ಮಂಜೇಗೌಡರ ಸಾಲದ ಮೊತ್ತವನ್ನು ಶೇ.50ರಷ್ಟು ಕಡಿಮೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ಜಿಲ್ಲಾ ಪಂಚಾಯ್ತಿನ ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ರೈತ ಮಂಜೇಗೌಡ ಪೂರ್ವಜರಿಂದ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ನಿಯಮಬದ್ಧವಾಗಿ ಪರಿಹಾರ ನೀಡಲಾಗಿದೆ ಎಂದರು.
ಸರ್ವೇ ನಂ.109, 103 ರಲ್ಲಿ ವ್ಯವಸಾಯ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಸೇರಿದ್ದರಿಂದ ಅಧಿಕಾರಿಗಳು ಉಳುಮೆ ಮಾಡದಂತೆ ತಡೆಹಿಡಿದಿದ್ದಾರೆ. ಮಂಜೇಗೌಡರಿಗೆ 4 ಎಕರೆ ಸ್ವಂತ ಜಮೀನಿದೆ. 2014ರಲ್ಲಿ ಬೆಳೆ ಬೆಳೆಯಲು 3.50 ಲಕ್ಷ ರು. ಸಾಲ ಪಡೆದಿದ್ದು, ಅದೀಗ ಬಡ್ಡಿ ಸೇರಿ 7.70 ಲಕ್ಷ ರು.ಗಳಾಗಿದೆ. ಈ ಸಾಲದ ಹಣದಲ್ಲಿ ಶೇ.50ರಷ್ಟು ಕಡಿತಗೊಳಿಸಿ ಸಾಲ ತೀರುವಳಿಗೆ ಅವಕಾಶ ನೀಡುವಂತೆ ತಿಳಿಸಲಾಗಿದೆ. ಬ್ಯಾಂಕ್‌ನವರು ಶೇ.25ರಷ್ಟು ಮಾತ್ರ ಕಡಿತಕ್ಕೆ ಒಪ್ಪಿದ್ದು, ಕುಟುಂಬದ ಹಿತದೃಷ್ಟಿಯಿಂದ ಒನ್ ಟೈಮ್ ಸೆಟ್ಲ್‌ಮೆಂಟ್‌ನಡಿ ಶೇ.50ರಷ್ಟು ಕಡಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.ರಿಂಗ್ ರಸ್ತೆಯ ಸ್ಥಳ ಬದಲಾವಣೆಗೆ ಶಾಸಕರಿಂದ ಮನವಿ
ಮಂಡ್ಯ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಿಂಗ್ ರಸ್ತೆಯ ಸ್ಥಳ ಬದಲಾವಣೆ ಮಾಡುವಂತೆ ಶಾಸಕ ಪಿ.ರವಿಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.ಹಳೆಯ ನೀಲಿ ನಕ್ಷೆ ಪ್ರಕಾರ ಗುರುತಿಸಿರುವ ಜಾಗಗಳಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಂಡಿವೆ. ಮತ್ತೆ ಅದೇ ರಸ್ತೆಯನ್ನು ರಿಂಗ್ ರಸ್ತೆಗೆ ಆಯ್ಕೆ ಮಾಡಿಕೊಂಡರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಆದ ಕಾರಣ ಬೂದನೂರಿನಿಂದ ಕಾರಸವಾಡಿ ಗ್ರಾಮ, ಬೇವಿನಹಳ್ಳಿ ಮೂಲಕ ಇಂಡುವಾಳು ಬಳಿ ರಸ್ತೆ ಸೇರುವಂತೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ಅದರ ಪ್ರಕಾರವೇ ಅಂದಾಜುಪಟ್ಟಿ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.