ವಸತಿನಿಲಯದ ಮಲೀನ ನೀರು ರಸ್ತೆಗೆ: ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : Nov 22, 2025, 02:45 AM IST
ಪೊಟೋ ಪೈಲ್ : 21ಬಿಕೆಲ್1,2 | Kannada Prabha

ಸಾರಾಂಶ

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಒಳಚರಂಡಿ ಸಂಪರ್ಕ ಇಲ್ಲದೇ ತೀವ್ರ ತೊಂದರೆಯಾಗಿದ್ದು ಹೊಲಸು ನೀರು ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಹರಿಯುತ್ತಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸಿ: ಸಮಸ್ಯೆ ಶೀಘ್ರ ಬಗೆಹರಿಸಲು ಸೂಚನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಒಳಚರಂಡಿ ಸಂಪರ್ಕ ಇಲ್ಲದೇ ತೀವ್ರ ತೊಂದರೆಯಾಗಿದ್ದು ಹೊಲಸು ನೀರು ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಹರಿಯುತ್ತಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸಲು ನೀರು ಆನಂದ ಆಶ್ರಮ ಕಾನ್ವೆಂಟ್ ಶಾಲೆಯ ಎದುರುಗಡೆಯಲ್ಲಿರುವ ಆಟದ ಮೈದಾನದಿಂದ ಹಾದು ಹೋಗುವಂತಾಗಿದ್ದು ಗಬ್ಬು ನಾರುತ್ತಿರುವುದರಿಂದ ನಾಗರಿಕರಿಗೆ, ಪಕ್ಕದ ಆಸ್ಪತ್ರೆಗೆ ಹೋಗುವವರಿಗೆ ಮತ್ತು ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಹಲವು ದಿನಗಳಿಂದ ಸಮಸ್ಯೆ ಇದ್ದರೂ ಬಗೆಹರಿಸಲು ಯಾರೂ ಮುಂದೆ ಬಂದಿಲ್ಲ.

ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸ್ಥಳಕ್ಕೆ ಸಹಾಯಕ ಆಯುಕ್ತೆ ಕಾವ್ಯಾರಾಣಿ ಕೆ.ವಿ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಅಭಿಯಂತರ ಅರವಿಂದ, ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿ ಶಂಶುದ್ಧೀನ್ ಶೇಖ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಈಗಾಗಲೇ ಸುಮಾರು ೧೦೦ ಮೀಟರ್ ಯುಜಿಡಿ ಪೈಪ್‌ನ್ನು ಅಲ್ಪ ಸಂಖ್ಯಾತರ ಇಲಾಖೆಯಿಂದ ಹಾಕಲಾಗಿದ್ದು, ಮುಂದುವರಿದು ಇನ್ನೂ ೪೦೦ರಿಂದ ೪೫೦ ಮೀಟರ್ ಪೈಪ್ ಅಳವಡಿಸಿ ಪುರಸಭೆಯ ಪ್ರಸ್ತುತ ಚಾಲೂ ಇರುವ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಕೊಡುವಂತೆ ಸೂಚಿಸಲಾಯಿತು. ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿ ಶಂಶುದ್ಧೀನ್ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮುಂದಿನ ಸೋಮವಾರದೊಳಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಸಿಕೊಳ್ಳುವಂತೆ ಸಹಾಯಕ ಆಯುಕ್ತೆ ಕಾವ್ಯಾರಾಣಿ ಕೆ.ಎಸ್. ಅಧಿಕಾರಿಗಳಿಗೆ ಸೂಚಿಸಿದರು.

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸರ್ಕಾರಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚು ಮಕ್ಕಳು ಇದ್ದು, ಪ್ರತಿ ದಿನ ಸುಮಾರು ೪ ಸಾವಿರ ಲೀಟರ್ ನೀರಿನ ಅವಶ್ಯಕತೆ ಇದೆ. ಇವೆಲ್ಲವನ್ನು ಕೂಡಾ ಹೊರಗೇ ಬಿಡಬೇಕಾದ ಅನಿವಾರ್ಯತೆ ಇದ್ದು ಕಂಪೌಂಡ್ ಒಳಗಡೆ ಬಿಟ್ಟರೆ ಹೊಲಸು ನಾರುವುದಲ್ಲದೇ ಪಕ್ಕದಲ್ಲಿಯೇ ಇರುವ ಬೋರ್‌ವೆಲ್ ನೀರು ಹಾಳಾಗುವ ಭೀತಿ ಕೂಡಾ ಅಧಿಕಾರಿಗಳನ್ನು ಕಾಡುತ್ತಿದೆ.

ಈಗಾಗಲೇ ಆಸ್ಪತ್ರೆ ರಸ್ತೆಯಲ್ಲಿ ಒಳಚರಂಡಿ ಪೈಪ್‌ಲೈನ್ ಹಾದು ಹೋಗಿದ್ದರೂ ಸಹ ಇದು ₹೨೦೦ ಕೋಟಿ ಪ್ರಾಜೆಕ್ಟ್ ಆಗಿರುವುದರಿಂದ ಇನ್ನೂ ಸುಮಾರು ಒಂದು ವರ್ಷಗಳ ಕಾಲ ಮುಗಿಯುವುದಕ್ಕೆ ಬೇಕಾಗಬಹುದು ಎನ್ನಲಾಗಿದೆ. ಈಗಾಗಲೇ ಪುರಸಭೆಯಿಂದ ಇರುವ ಒಳಚರಂಡಿಗೆ ಸಂಪರ್ಕ ಕಲ್ಪಿಸಲು ಸುಮಾರು ೪೦೦ರಿಂದ ೪೫೦ ಮೀಟರ್ ಒಳಚರಂಡಿ ವ್ಯವಸ್ಥೆಯನ್ನು ಇಲಾಖೆಯೇ ಮಾಡಿಕೊಳ್ಳಬೇಕಾಗುವುದರಿಂದ ನಗರದ ಜನತೆ ಸಂಕಷ್ಟಪಡುವಂತಾಗಿದೆ. ಪುರಸಭೆಯಿಂದ ಯುಜಿಡಿ ಸಂಪರ್ಕ ಕಲ್ಪಿಸಲು ಅವಕಾಶವೇ ಇಲ್ಲವಾಗಿದ್ದರಿಂದ ಪುರಸಭಾ ಅಧಿಕಾರಿಗಳು ತಮ್ಮಲ್ಲಿ ಸಂಪರ್ಕ ನೀಡುವುದಾದಲ್ಲಿ ಯುಜಿಡಿ ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕೊಡಿ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತ ಇಲಾಖೆಯಿಂದಲೇ ಸುಮಾರು ೪೦೦ರಿಂದ ೪೫೦ ಮೀಟರ್ ಪೈಪ್‌ಲೈನ್ ಅಳವಡಿಸಿ ಯುಜಿಡಿ ಸಂಪರ್ಕ ಕಲ್ಪಿಸಲು ಅವಕಾಶವಿದ್ದರೆ ನಾವು ಸಂಪರ್ಕ ನೀಡಲು ಸಿದ್ಧ ಎನ್ನುವುದು ಅವರ ವಾದವಾಗಿದೆ. ಒಟ್ಟಾರೆ ಸ್ಥಳಕ್ಕೆ ಎಸಿ ಭೇಟಿ ನೀಡಿ ಶೀಘ್ರ ಒಂದು ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದ್ದು, ಇಲಾಖೆ ಮುತುವರ್ಜಿ ವಹಿಸಿ ಕ್ರಮ ಕೈಗೊಂಡು ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಬೇಕಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ