ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ, ಉಪ ಲೋಕಾಯುಕ್ತರು, ನ್ಯಾಯಾಧೀಶರು, ಆಹಾರ ನಿಗಮದ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿ ಹಲವಾರು ಅವ್ಯವಸ್ಥೆಗಳನ್ನು ಗುರುತಿಸಿ ಹೋಗಿದ್ದಾರೆ. ಆ ಲೋಪಗಳನ್ನು ಸರಿಪಡಿಸಿಕೊಳ್ಳುವಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಇದು ಮಂಡ್ಯ ಜಿಲ್ಲಾಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಹಲವರು ಟೀಕಿಸಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ನಿತ್ಯ ಸಾವಿರಾರು ರೋಗಿಗಳು ಬರುತ್ತಿದ್ದಾರೆ. ಹೆರಿಗೆಗೆ ನಿರಂತರವಾಗಿ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಆದರೆ, ದೊಡ್ಡಾಸ್ಪತ್ರೆಗೆ ಬರುವ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗದಷ್ಟು ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದ್ದಾರೆ.ಆಸ್ಪತ್ರೆಯ ಆವರಣದಲ್ಲಿರುವ ವಾಟರ್ ಟ್ಯಾಂಕ್‌ನ್ನು ಹತ್ತು ವರ್ಷಗಳಿಂದ ಶುಚಿಗೊಳಿಸಿಲ್ಲ. ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ವಾಟರ್ ಪ್ಯೂರಿಫೈಯರ್‌ಗಳು ಕೆಟ್ಟು ಹಾಳಾಗಿದ್ದರೂ ಇದುವರೆಗೂ ಮಿಮ್ಸ್ ನಿರ್ದೇಶಕರಾಗಲೀ, ಮಿಮ್ಸ್ ವೈದ್ಯಕೀಯ ಅಧೀಕ್ಷಕರಾಗಲೀ ಅತ್ತ ತಿರುಗಿನೋಡಿಲ್ಲ. ಆಸ್ಪತ್ರೆಯ ರೋಗಿಗಳು, ಸಂಬಂಧಿಕರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ ದಿವ್ಯಮೌನ ವಹಿಸಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಆಪಾದಿಸಿದರು.
ಗರ್ಭಿಣಿಯರು, ಬಾಣಂತಿಯರ ಅನುಕೂಲಕ್ಕಾಗಿ ದಾನಿಗಳು, ಸಂಘ-ಸಂಸ್ಥೆಯವರು ನೀಡಿರುವ ವಾಟರ್‌ಫಿಲ್ಟರ್‌ಗಳನ್ನು ಸಮರ್ಪಕ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಫಿಲ್ಟರ್ ಬದಲಾವಣೆ ಮಾಡದ ಮಿಮ್ಸ್ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಒಂದು ವಾಟರ್ ಫಿಲ್ಟರ್‌ನಲ್ಲಿ ಕೊಳಕು ನೀರು ಬರುತ್ತಿದ್ದರೆ, ಮತ್ತೊಂದರಲ್ಲಿ ಹುಳಗಳು ಹಾಗೂ ಹುಳುಗಳ ಮೊಟ್ಟೆ ಇರುವ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇವೆರಡರಲ್ಲೂ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿದೆ. ಆದರೂ ವೈದ್ಯಾಧಿಕಾರಿಗಳು ಇತ್ತ ತಿರುಗಿನೋಡಿಲ್ಲವೆಂದು ಆರೋಪಿಸಿದ್ದಾರೆ.ಮಿಮ್ಸ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುಲಗೆಟ್ಟು ಹಾಳಾಗಿದೆ. ಗರ್ಭಿಣಿ, ಬಾಣಂತಿಯರು, ಸಂಬಂಧಿಕರಿಗೆ ವಾಟರ್ ಫಿಲ್ಟರ್‌ಗಳಿಂದ ಕಲುಷಿತ ನೀರನ್ನು ಪೂರೈಸಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರು ಜನರಿಗೆ ಸರಬರಾಜಾಗುತ್ತಿದ್ದರೂ ವೈದ್ಯಾಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಅವರಿಗೆ ಜನಹಿತ ಬೇಕಾಗಿಲ್ಲ. ತಕ್ಷಣವೇ ಟ್ಯಾಂಕ್ ಸ್ವಚ್ಛಗೊಳಿಸಿ, ಫಿಲ್ಟರ್‌ಗಳನ್ನು ಬದಲಾಯಿಸಿ ಶುದ್ಧ ನೀರು ಒದಗಿಸಲು ಮುಂದಾಗಬೇಕು.
- ರಿಜ್ವಾನ, ಚನ್ನಪಟ್ಟಣ, ರಾಮನಗರ ಜಿಲ್ಲೆ