ಹೊಸಪೇಟೆ: ವಿಕಲಚೇತನರಿಗೆ ವಿಕಲಾಂಗತೆ ದೌರ್ಬಲ್ಯವಲ್ಲ. ದೈಹಿಕ ನ್ಯೂನತೆಯ ಜೊತೆಗೆ ವಿಶೇಷ ಸಾಮರ್ಥ್ಯ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ವಿಕಲಾಂಗರು ದೈಹಿಕವಾಗಿ ನ್ಯೂನತೆಗಳನ್ನು ಹೊಂದಿರಬಹುದು. ಆದರೆ ನಾಗರಿಕ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಗಳು ಕೊಳಕು ಮನಸ್ಥಿತಿಯಿಂದ ಮಾನಸಿಕ ವಿಕಲಾಂಗತೆ ಹೆಚ್ಚಿಸಿಕೊಂಡಿದ್ದಾರೆ. ಅಂತಹ ಹೀನ ವ್ಯಕ್ತಿಗಳಿಗೆ ನಿಜವಾದ ವಿಕಲಚೇತನರು ಎನ್ನಬಹುದು. ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತರನ್ನು ಒಳಗೊಂಡು ಸಮಾಜಗಳನ್ನು ರೂಪಿಸುವುದು 2025ರ ವಿಶ್ವಸಂಸ್ಥೆಯ ಘೋಷವಾಕ್ಯವಾಗಿದೆ. ವಿಶೇಷಚೇತನರಿಗೂ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಅವರನ್ನು ಪ್ರತ್ಯೇಕ ಎಂದು ಭಾವಿಸದೇ ಅವರನ್ನು ಒಳಗೊಂಡಂತೆ ಸಮಾಜದ ಪ್ರಗತಿಯಾಗಲಿ ಎಂಬುದು ವಿಶ್ವಸಂಸ್ಥೆ ಉದ್ದೇಶವಾಗಿದೆ. ವಿಶೇಷ ಚೇತನರು ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಕೌಶಲ್ಯವನ್ನು ಹೊಂದಿರುತ್ತಾರೆ. ಅದನ್ನು ಅವರು ಗುರುತಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಸಾಧನೆಗೆ ಮುಂದಾಗಬೇಕು. ದೃಢವಾದ ಮನಸ್ಸು ಮತ್ತು ಛಲವಿದ್ದರೆ ಯಾವ ವ್ಯಕ್ತಿಯಾದರೂ ಸಾಧನೆ ಮಾಡಬಹುದು. ಸರ್ಕಾರದಿಂದ ವಿಕಲಚೇತನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿಕಲಚೇತನರ ಹಕ್ಕುಗಳು, ಘನತೆ ಮತ್ತು ಯೋಗಕ್ಷೇಮದ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಇದೇ ವೇಳೆ ವಿಶ್ವ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ್, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜಿನೇಯ, ಎಂಆರ್‌ಡಬ್ಲೂ, ಯುಆರ್‌ಡಬ್ಲೂ, ವಿಆರ್‌ಡಬ್ಲೂ ತಾಲೂಕು ಕಾರ್ಯಕರ್ತರು, ವಿಕಲಚೇತನರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ವಿಶೇಷ ಚೇತನ ವಿದ್ಯಾರ್ಥಿಗಳು ಭಾಗವಹಿಸಿದ್ದರು.