ಕುಷ್ಟಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಇಲಾಖೆಗಳ ಅನುದಾನ ಒಳಗೊಂಡಂತೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿ ಮುನ್ನೋಟ ತಯಾರಿಸಲು ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ಮಹತ್ವ ಪಡೆಯುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ (ಟಿಪಿಡಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮ ಸ್ವರಾಜ್ ಕಲ್ಪನೆಯಂತೆ ಹಳ್ಳಿಯಿಂದ ಯೋಜನೆ ರೂಪುಗೊಳ್ಳಲು ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳು ಪೂರಕವಾಗಿದ್ದು, ಅಧಿಕಾರಿಗಳು ಆದ್ಯತೆ ಮೇರೆಗೆ ಕಾಮಗಾರಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮಸಭೆಯಲ್ಲಿ ಬಂದ ಕಾಮಗಾರಿಗಳ ಪ್ರಸ್ತಾವನೆ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸಮಗ್ರ ಅಭಿವೃದ್ಧಿಗಾಗಿ 2026-2027 ನೇ ಸಾಲಿನ ತಾಲೂಕು ವಾರ್ಷಿಕ ಕರಡು ಯೋಜನೆ ರೂಪಿಸಲಾಗಿದ್ದು, ಇನ್ನು ಎರಡು ದಿನಗಳ ಕಾಲವಕಾಶವಿದ್ದು, ಕ್ರೀಯಾ ಯೋಜನೆಗೆ ಸೇರ್ಪಡೆ ಮಾಡುವದಿದ್ದರೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತರಬೇಕು ಎಂದು ಹೇಳಿದ ಅವರು, ಮುಂಬರುವ ಆರ್ಥಿಕ ಸಾಲಿನಲ್ಲಿ ಅನುಮೋದನೆಗೊಂಡ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ಮಾಡದೇ ಕಾಮಗಾರಿಗಳ ಅನುಷ್ಠಾನ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ತಾಲೂಕಿನ ವಾರ್ಷಿಕ ಕರಡು ಯೋಜನೆ ರೂಪಿಸಲು ಇದು ಪೂರಕ ಸಭೆಯಾಗಿದೆ. ಚಳಿಗಾಲ ಅಧಿವೇಶನದಲ್ಲಿ ಇದು ಅನುಮೋದನೆ ಆಗುತ್ತದೆ. ಆಗಾಗಿ ಸಮಗ್ರ ಮಾಹಿತಿ ನೀಡಬೇಕು ಎಂದು ತಿಳಿಸಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಕ್ರಿಯಾ ಯೋಜನೆ ಮಾಹಿತಿ ಹಂಚಿಕೊಂಡರು.ಈ ಸಂದರ್ಭದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.