ಕೂಡ್ಲಿಗಿ: ಕ್ಷೇತ್ರ ಎಷ್ಟು ಹಿಂದುಳಿದಿತ್ತೋ ಅಷ್ಟು ಮುಂದುವರೆಯುವಂತೆ ಮಾಡುವುದೇ ನನ್ನ ಉದ್ದೇಶವಾಗಿದೆ. ಕ್ಷೇತ್ರಕ್ಕೆ ಅನುದಾನ ತಂದು ಸರ್ವಾಂಗೀಣ ಅಭಿವೃದ್ಧಿ ಮಾಡಲು ಹಗಲಿರುವ ಶ್ರಮಿಸುವೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.ಅವರು ತಾಲೂಕಿನ ಹೊಸಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಉನ್ನತೀಕರಣಕ್ಕೆ ₹30 ಲಕ್ಷ ಕಾಮಗಾರಿ ಹಾಗೂ ಕಾನಹೊಸಹಳ್ಳಿ-ರಂಗನಾಥನಳ್ಳಿ ರಸ್ತೆ ಉದ್ಘಾಟನೆ ಸೇರಿದಂತೆ ₹7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಕ್ಷೇತ್ರದ ಜನತೆಯ ಆರೋಗ್ಯ, ಶಿಕ್ಷಣದ ಹಾಗು ಕುಡಿಯುವ ನೀರಿನಂತಹ ಮೂಲಸೌಕರ್ಯಗಳಿಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಈಗಾಗಲೇ ಗಡಿ ಗ್ರಾಮಗಳು ಸೇರಿದಂತೆ ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಂತ-ಹಂತವಾಗಿ ಬಗೆಹರಿಸಲಾಗುತ್ತಿದೆ. ಚರಂಡಿ, ಸಿಸಿ ರಸ್ತೆ, ವಿದ್ಯುತ್ ಸಂಪರ್ಕ ಸೇರಿ ಇತರೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಜನತೆ ಸ್ವಚ್ಚತೆಯ ಕಡೆ ಹೆಚ್ಚು ಗಮನಹರಿಸಬೇಕಿದೆ. ನಮ್ಮ ಸುತ್ತಲಿನ ವಾತಾವರಣ ಶುಚಿಯಾಗಿದ್ದಾಗ ಮಾತ್ರ ಆರೋಗ್ಯವಂತಹ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಕ್ಷೇತ್ರದ ಅಭಿವೃದ್ಧಿ ಜತೆ ಜನತೆಯ ಆರೋಗ್ಯವೂ ಮುಖ್ಯ ಎಂದರು.ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ, ಗಾಣಗಟ್ಟೆ ಕ್ಷೇತ್ರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ ಕೂಡ್ಲಿಗಿಯಿಂದ ಉಜ್ಜಿನಿಗೆ ರಸ್ತೆ ಮಾಡಲಾಗಿದೆ. ಈ ರಸ್ತೆಯುನ್ನು ಅಭಿವೃದ್ಧಿ ಮಾಡಲಾಗುವುದು. ಕಳಪೆ ಕಾಮಗಾರಿ ಮಾಡದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಜಿ. ಗುರುಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಗೌಡ, ವಿಎಸ್ಎಸ್ಎನ್ ಅಧ್ಯಕ್ಷ ಬಿ.ಇ. ಜಗದೀಶ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಬಣವಿಕಲ್ಲು ಎರ್ರಿಸ್ವಾಮಿ, ಜಿಪಂ ಎಇಇ ಮಲ್ಲಿಕಾರ್ಜುನ್, ಜಿಲ್ಲಾ ಸರ್ವೇಕ್ಷಾಣಧಿಕಾರಿ ಡಾ.ಷಣ್ಮುಖನಾಯ್ಕ, ಬಿಇಒ ಮೈಲೇಶ್ ಬೇವೂರು, ಟಿಎಚ್ ಒ ಡಾ.ಪ್ರದೀಪ್, ವೈದ್ಯಾಧಿಕಾರಿ ಡಾ.ವಿಶ್ವನಾಥ್, ಮಾಜಿ ಗ್ರಾಪಂ ಉಪಾಧ್ಯಕ್ಷ ಬೋರಣ್ಣ, ಸೂರ್ಯಪ್ರಕಾಶ, ಗ್ರಾಪಂ ಸದಸ್ಯರಾದ ರಮೇಶ್, ಹೊನ್ನೂರಸ್ವಾಮಿ, ಅಡೆವೆಜ್ಜರ್ ನಾಗೇಶ್, ಪಿಡಿಒ ವಿನಯಕುಮಾರ್ ಇದ್ದರು.