ಕರ್ನಾಟಕಕ್ಕೆ ಯಾವುದೇ ಧರ್ಮ, ಜಾತಿಯ ಗಡಿಯ ಹಂಗಿಲ್ಲ. ಉದ್ಯೋಗದ ನಿಮಿತ್ತ ಅನೇಕರು ವಿದೇಶಕ್ಕೆ ಹಾಗೂ ನೆರೆಯ ರಾಜ್ಯಕ್ಕೆ ಹೋಗಿ ವಾಸಿಸಿದ ಕನ್ನಡಿಗರೂ ಇದ್ದಾರೆ.
ಧಾರವಾಡ:
ಕನ್ನಡ ಮಾತೃ ಭಾಷೆ ಇರುವವರು ಮಾತ್ರ ಕನ್ನಡಿಗರಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಗಾಂರ್ ತಮಿಳು ಭಾಷಿಕರು. ದ.ರಾ. ಬೇಂದ್ರೆ ಮರಾಠಿ ಭಾಷಿಕರು, ಶಿವರಾಮ ಕಾರಂತರು ತುಳು ಭಾಷಿಕರಾದರೆ, ಗಿರೀಶ ಕಾರ್ನಾಡ ಕೊಂಕಣಿ ಭಾಷಿಕರಾಗಿದ್ದರು. ಇವರೆಲ್ಲ ಕನ್ನಡಿಗರಲ್ಲ, ಕನ್ನಡಿಗರಾಗಿ ಕನ್ನಡ ಭಾಷೆ, ಸಂಸ್ಕೃತಿಯ ಶ್ರೀಮಂತಿಕೆ ಹೆಚ್ಚಿಸಿದವರು ಎಂದು ಹಿರಿಯ ಉಪನ್ಯಾಸಕ ಡಾ. ಎಂ.ಡಿ. ಒಕ್ಕುಂದ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ತಿಂಗಳು ಪೂರ್ಣ ಕಾರ್ಯಕ್ರಮದ ಸಮಾರೋಪದಲ್ಲಿ ವಾಗ್ಭೂಷಣ ಪತ್ರಿಕೆಯ ಲೋಕಾರ್ಪಣೆ ಮಾಡಿದ ಅವರು, ಕರ್ನಾಟಕಕ್ಕೆ ಯಾವುದೇ ಧರ್ಮ, ಜಾತಿಯ ಗಡಿಯ ಹಂಗಿಲ್ಲ. ಉದ್ಯೋಗದ ನಿಮಿತ್ತ ಅನೇಕರು ವಿದೇಶಕ್ಕೆ ಹಾಗೂ ನೆರೆಯ ರಾಜ್ಯಕ್ಕೆ ಹೋಗಿ ವಾಸಿಸಿದ ಕನ್ನಡಿಗರೂ ಇದ್ದಾರೆ. ಕಿಟೆಲ್ ಹಾಗೂ ಬಿ.ಎಲ್. ರೈಸ್‌ರಂತಹ ಮಹಾಮುತ್ಸದ್ಧಿಗಳು ವಿದೇಶಿಯರಾದರೂ ಕನ್ನಡದ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ಶಿಶುನಾಳ ಶರೀಫರು, ಕವಿ ನಿಸ್ಸಾರ ಅಹಮ್ಮದ್ ಹಾಗೂ ಬಾನು ಮುಸ್ತಾಕ ಮುಸ್ಲಿಂ ಧರ್ಮದವರಾಗಿದ್ದರೂ ಕನ್ನಡಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಬಾನು ಮುಸ್ತಾಕ ಬೂಕರ ಪ್ರಶಸ್ತಿಗೆ ಭಾಜನರಾಗಿ ಕನ್ನಡಕ್ಕೆ ಕೀರ್ತಿ ತಂದವರಾಗಿದ್ದಾರೆ ಎಂದರು. ಮರಾಠಿಮಯವಾಗಿದ್ದ ಆ ಕಾಲದಲ್ಲಿ ಕನ್ನಡದ ನೆಲದಲ್ಲಿ ಕನ್ನಡಿಗರು ಕನ್ನಡ ಭಾಷೆ ಮಾತನಾಡುವುದೇ ಅಪರಾಧವೆಂಬ ಪರಿಸ್ಥಿತಿ ಇತ್ತು. ಸಂದಿಗ್ಧ ಸಮಯದಲ್ಲಿ ಕನ್ನಡಿಗರಲ್ಲಿ ಅಭಿಮಾನ ಹಾಗೂ ಜಾಗೃತಿ ಮೂಡಿಸಲು ಕವಿವ ಸಂಘವು 1890ರಲ್ಲಿ ಹುಟ್ಟಿಕೊಂಡಿತು. 1896ರಲ್ಲಿ ಸಂಘವು ಸಾಹಿತ್ಯದ “ವಾಗ್ಭೂಷಣ” ಎಂಬ ಮುಖವಾಣಿ ಪತ್ರಿಕೆ ಪ್ರಾರಂಭಿಸಿತು. ಪತ್ರಿಕೆ ಪ್ರಕಟಣೆ ಪ್ರಾರಂಭದಲ್ಲಿ ಅನೇಕ ಏಳು-ಬೀಳುಗಳ ಮಧ್ಯ 23 ವರ್ಷ ನಿರಂತರವಾಗಿ ಪ್ರಕಟಣೆಯಾಗಿ, ಆರ್ಥಿಕ ಸಂಕಷ್ಟ ಮತ್ತೆ ಎದುರಾಗಿ ನಿಲ್ಲುವ ಪರಿಸ್ಥಿತಿ ಬಂದಿತು. ಈ ಪತ್ರಿಕೆ ಉಳಿವಿಗಾಗಿ ಆಲೂರ ವೆಂಕಟರಾಯರು ಪಟ್ಟಶ್ರಮ ಎದುರಿಸಿದ ಸಮಸ್ಯೆ ಅಷ್ಟಿಷ್ಟಲ್ಲಾ. ಆದರೆ ಇಂತಹ ಪತ್ರಿಕೆ ಈಗಿನ ಆಡಳಿತ ಮಂಡಳಿ ಮತ್ತೆ ಪ್ರಾರಂಭಿಸಿದೆ. ಇದರ ಉಳಿವಿಗಾಗಿ ಈ ಪತ್ರಿಕೆಗೆ ತನ್ನದೇ ಒಂದು ಸಂಚಿತ ನಿಧಿ ಇಡಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಭೈರನಟ್ಟಿ ದೊರೆಸ್ವಾಮಿ ಮಠದ ಶಾಂತಲಿಗ ಸ್ವಾಮೀಜಿ, ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದಾಗ ಕರ್ನಾಟಕ ವಿದ್ಯಾವರ್ಧಕ ಸಂಘ ‘ಕರ್ನಾಟಕ’ ಎಂಬ ಹೆಸರಿನಿಂದ ಉದಯವಾಯಿತು. ಈ ವಾಗ್ಭೂಷಣ ಎಂಬ ಸಂಘದ ಪತ್ರಿಕೆ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ದಿಕ್ಸೂಚಿಯಾಗಿತ್ತು. ಕನ್ನಡದ ಕಾಶಿ, ಕನ್ನಡಿಗರ ಕೂಡಲಸಂಗಮ ಎಂದು ಬಣ್ಣಿಸಿದರು.
ಡಾ. ವೈ.ಎಂ. ಭಜಂತ್ರಿ, ಡಾ. ವೆಂಕಟೇಶ ಮುತಾಲಿಕ, ಪ್ರೊ. ಎ.ಐ. ಮುಲ್ಲಾ, ಪ್ರೊ. ಎಂ.ಎಸ್. ಗಾಣಿಗೇರ, ಡಾ. ರೇಖಾ ಜೋಗುಳ, ಪ್ರೊ. ಧನವಂತ ಹಾಜವಗೋಳ, ಪ್ರೊ. ಸಿ.ವಿ. ಕಣಬರ್ಗಿ ಅವರನ್ನು ಗೌರವಿಸಲಾಯಿತು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ, ಶ್ರೀನಿವಾಸ ವಾಡಪ್ಪಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.