ಸಂಡೂರು: ನಾನು ೨೦೦೪ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ನಂಜುಂಡಪ್ಪ ವರದಿ ಪ್ರಕಾರ ಸಂಡೂರು ತಾಲೂಕು ಅತಿ ಹಿಂದುಳಿದ ತಾಲೂಕೆಂದು ಗುರುತಿಸಲ್ಪಟ್ಟಿತ್ತು. ಇಂದು ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
೨೦೦೪ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದಾಗ ವಿಠಲಾಪುರ ಭಾಗದಲ್ಲಿ ಬೀದಿದೀಪಗಳು ಹತ್ತಿದರೂ ಅವುಗಳ ಬೆಳಕು ನೆಲಕ್ಕೆ ಬೀಳದಂತಹ ಪರಿಸ್ಥಿತಿ ಇತ್ತು. ಇಂದು ಈ ಭಾಗದಲ್ಲಿ ಸಬ್ ಸ್ಟೇಷನ್ ಆದ ಮೇಲೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ. ಎನ್‌ಎಂಡಿಸಿಯ ಸಹಕಾರದೊಂದಿಗೆ ೧೩ ಆ್ಯಂಬುಲೆನ್ಸ್‌ಗಳ ಮೂಲಕ ಕ್ಲಿನಿಕ್ ಆನ್ ವೀಲ್ ಯೋಜನೆ ಅಡಿ, ಗ್ರಾಮಾಂತರ ಪ್ರದೇಶಗಳಲ್ಲಿಯೂ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸಂಡೂರು ಪಟ್ಟಣವಲ್ಲದೆ, ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆಗೂ ತುಂಗಭದ್ರಾ ನದಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹೬೦ ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ ₹೩ ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ನಾವು ಪಕ್ಷಾತೀತವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನನ್ನ ಕೊನೆಯ ಉಸಿರಿರುವವರೆಗೆ ಜನರ ಸೇವೆ ಮಾಡುವೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸದ ಈ. ತುಕಾರಾಂ, ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು, ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ೨೦೦೮ ರಿಂದ ಇಲ್ಲಿಯವರೆಗೆ ₹೪೭೦೦ ಕೋಟಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ₹೪೨೫ ಕೋಟಿ ವೆಚ್ಚದಲ್ಲಿ ಸಂಡೂರು ಸೇರಿದಂತೆ ಗ್ರಾಮಾಂತರ ಪ್ರದೇಶದ ಜನತೆಗೆ ಮನೆಮನೆಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲಿ ಐದು ಸಾವಿರ ಕೋಟಿ ರು. ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಆರಂಭಿಸಲಾಗುವುದು. ಇನ್ನು ೬ ತಿಂಗಳಲ್ಲಿ ಈ ಜೀನ್ಸ್ ಪಾರ್ಕ್‌ಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಲಕ್ಷ್ಮಣ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಠಲಾಪುರ ಭಾಗದಲ್ಲಿ ವಿವಿಧ ಶಾಲೆ, ಕಾಲೇಜುಗಳ ಸ್ಥಾಪನೆಗೆ ಭೂಮಿ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಗರ್ಭಿಣಿಯರಿಗೆ ಉಡಿ ತುಂಬಿ ಶುಭ ಹಾರೈಸಲಾಯಿತು. ಸ್ವಸಹಾಯ ಸಂಘಗಳಿಗೆ ಸಹಾಯಧನವನ್ನು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲಾಯಿತು.