ಗಜೇಂದ್ರಗಡ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು, ಟಿಕೆಟ್ ಗಿಟ್ಟಿಸಲು ಪಟ್ಟಣದ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಸಹ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲವಿದೆ.ಪಶ್ಚಿಮ ಪದವೀಧರರ ಕ್ಷೇತ್ರವು ಸದ್ಯ ಬಿಜೆಪಿ ವಶದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ೧೮ ವರ್ಷದ ಕನಸನ್ನು ನನಸಾಗಿಸಿಕೊಳ್ಳಲು ತಂತ್ರಗಾರಿಕೆ ಹೆಣೆಯುತ್ತಿದೆ. ಸೂಕ್ತ ಹಾಗೂ ಸಮರ್ಥ ಅಭ್ಯರ್ಥಿಯ ಹುಡುಕಾಟಕ್ಕೆ ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ಮತದಾರರ ನಾಡಿಮಿಡಿತ ಅರಿಯಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬದಲಾವಣೆಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದು ಕಾರ್ಯಕರ್ತರ ಆಗ್ರಹಕ್ಕೆ ಪಕ್ಷವು ಸಕಾರಾತ್ಮಕವಾಗಿ ಯೋಚಿಸುತ್ತಿದೆ ಎಂಬುದು ಹೊಸ ಆಕಾಂಕ್ಷಿಗಳ ಅಭಿಪ್ರಾಯವಾಗಿದೆ. ಹೀಗಾಗಿ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರನ್ನು ಭೇಟಿಯಾಗಿರುವ ಮುಖಂಡ ಸಿದ್ದಪ್ಪ ಬಂಡಿ ಪಶ್ಚಿಮ ಪದವೀಧರರ ಚುನಾವಣೆಗೆ ಟಿಕೆಟ್ ಕೊಡಿಸಬೇಕೆಂದು ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಚುನಾವಣಾ ಸಿದ್ಧತೆಗೆ ಮುಂದಾಗಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ವಿರುದ್ಧ ಸೋತಿರುವ ಡಾ. ಆರ್.ಎಂ. ಕುಬೇರಪ್ಪ ಸಹ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳಲು ಓಡಾಡುತ್ತಿದ್ದಾರೆ. ಒಟ್ಟಾರೆ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಪಡೆಯಲು ಹಾವೇರಿ ಹಾಗೂ ಹುಬ್ಬಳ್ಳಿ- ಧಾರವಾಡ ಶಹರ ಸೇರಿ 12ಕ್ಕೂ ಅಧಿಕ ಆಕಾಂಕ್ಷಿಗಳು ತೆರೆಮರೆಯಲ್ಲಿ ಓಡಾಡುತ್ತಿದ್ದಾರೆ. ಏತನ್ಮಧ್ಯೆ ಗಜೇಂದ್ರಗಡ- ರೋಣ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಅವರು ಟಿಕೆಟ್‌ಗಾಗಿ ತೀವ್ರ ಒತ್ತಡ ಹೇರುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.ಕಾಂಗ್ರೆಸ್ಸಿಗೆ ಕೊಡುಗೆ ಅಪಾರರೋಣ ವಿಧಾನಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಿದ್ದಪ್ಪ ಬಂಡಿ ಅವರು ಜಿ.ಎಸ್. ಪಾಟೀಲ ಗೆಲುವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬೆಲ್ಲ ಓಡಾಡಿದ್ದರು. ಗಜೇಂದ್ರಗಡ ಪುರಸಭೆಯ ಕೊನೆಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪುರಸಭೆ ಆಡಳಿತದ ಗದ್ದುಗೆ ಹಿಡಿಯಲು ಶ್ರಮಿಸಿದ ಮುಂಚೂಣಿ ಮುಖಂಡರಲ್ಲಿ ಸಿದ್ದಪ್ಪ ಬಂಡಿ ಸಹ ಒಬ್ಬರು.
ಈ ಹಿಂದೆ ನಿಗಮ ಸ್ಥಾನ ನೀಡಬೇಕು ಎಂದು ನೂರಾರು ಸಂಖ್ಯೆಯಲ್ಲಿ ಶಾಸಕರಿಗೆ ಮನವಿ ಮಾಡಿದ್ದರು. ಆದರೆ ಫಲ ನೀಡಿರಲಿಲ್ಲ. ಹೀಗಾಗಿ ಪಟ್ಟಣ ಸೇರಿ ತಾಲೂಕಿನಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಸಿದ್ದಪ್ಪ ಬಂಡಿಗೆ ಈ ಬಾರಿ ಟಿಕೇಟ್ ನೀಡಬೇಕು ಎಂಬುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.ಮನವಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ನಿಲ್ಲಲು ಅವಕಾಶ ನೀಡುವಂತೆ ಶಾಸಕ ಜಿ.ಎಸ್. ಪಾಟೀಲ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಟಿಕೆಟ್ ಸಿಗುವ ವಿಶ್ವಾಸವಿದೆ. ಡಿ. 4ರಂದು ನಡೆಯುವ ಸಭೆಯಲ್ಲಿಯೂ ಟಿಕೆಟ್ ನೀಡುವಂತೆ ಮುಖಂಡರಿಗೆ ಮನವಿ ಮಾಡುತ್ತೇನೆ ಎಂದು ಪಶ್ಚಿಮ ಪದವೀಧರರ ಟಿಕೆಟ್ ಆಕಾಂಕ್ಷಿ ಸಿದ್ದಪ್ಪ ಬಂಡಿ ತಿಳಿಸಿದರು.