ಬಳ್ಳಾರಿ: ವಿಕಲಚೇತನರು ಸಹ ಈ ಸಮಾಜದ ಸಮರ್ಥ ಸೃಜನಶೀಲ ವಿಭಾಗ ಎಂದು ಭಾವಿಸಿ, ಅವರನ್ನು ಮುಖ್ಯವಾಹಿನಿಗೆ ತರಲು ಬೇಕಾದ ಎಲ್ಲ ಪೂರಕ ಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ತಿಳಿಸಿದರು.ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ-ಮಾನಸಿಕವಾಗಿ ಸದೃಢ ಇರುವ ಮನುಷ್ಯರು ಕಷ್ಟಕರ ಜೀವನ ನಡೆಸುತ್ತಿರುತ್ತಾರೆ. ಆದರೆ ವಿಕಲಚೇತನರು ಕಷ್ಟ-ನೋವು, ಅಸಹಾಯಕತೆಯ ಸಂದರ್ಭದಲ್ಲಿಯೂ ಯಾವುದೇ ಬೆಂಬಲವಿಲ್ಲದೇ ಛಲದಿಂದ ಜೀವನ ನಡೆಸಲು ಶಕ್ತರಾಗಿರುವುದು ಕಂಡು ಬರುತ್ತಿದೆ. ವಿಕಲಚೇತನರ ಪೋಷಕರು ಹಾಗೂ ಆರೈಕೆ ಮಾಡುವ ಆರೈಕೆದಾರರು ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವರೋ ಅದಕ್ಕೆ ಬೆಂಬಲ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಜಿಲ್ಲೆಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳು ವಿಕಲಚೇತನರನ್ನು ಮಕ್ಕಳಂತೆ ಆರೈಕೆ ಮಾಡಿ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ವಿಕಲಚೇತನರು ಸ್ವಾವಲಂಬಿಯಾಗಿ ಬದುಕುವ ಛಲ ಹೊಂದಿದ್ದಾರೆ. ಕರುಣೆ ತೋರದೇ ಅವರನ್ನು ಸಮಾನತೆಯಿಂದ ಕಾಣಬೇಕು. ಮಹಾನಗರ ಪಾಲಿಕೆಯ ಆಯ್ಯ-ವ್ಯಯ ಸಭೆ ಡಿ.9ಕ್ಕೆ ಜರುಗಲಿದೆ. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಸಭೆಯಲ್ಲಿ ಭಾಗವಹಿಸಿ ತಮ್ಮ ಮನವಿಗಳು, ಬೇಡಿಕೆಗಳನ್ನು ಪ್ರಸ್ತಾಪಿಸಬಹುದು ಎಂದು ತಿಳಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನರಿಗೆ ಸನ್ಮಾನಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿಕಲಚೇತನರಿಗೆ ಬಹುಮಾನ ವಿತರಿಸಲಾಯಿತು.