ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸದಸ್ಯತ್ವ ರದ್ದು ಪಡಿಸಿ ಆದೇಶ ನೀಡಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸರಕಾರದ ಒತ್ತಡಕ್ಕೆ ಮಣಿದು ಪ್ರತಿವಾದವನ್ನು ಆಲಿಸದೇ ಏಕ ಪಕ್ಷೀಯವಾಗಿ ಆದೇಶ ನೀಡಿರುವುದು ಅತ್ಯಂತ ನೋವಿನ ಸಂಗತಿ. ಜಿಲ್ಲಾಡಳಿದ ಈ ನಡೆಯ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಂದು ಪಟ್ಟಣ ಪಂಚಾಯಿತಿ ಅನರ್ಹ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹಾಗೂ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ ಆಕ್ರೋಶ ವ್ಯಕ್ತಪಡಿಸಿದರು.
ಶಿವಕುಮಾರ ಉಪ್ಪಾರ ಮಾತನಾಡಿ, ಜಿಲ್ಲಾಧಿಕಾರಿಗಳು ನನ್ನ ಸದಸ್ಯತ್ವವನ್ನು ರದ್ದು ಮಾಡಿದ್ದಾರೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ನಮ್ಮ ವಾದ ಆಲಿಸದೇ ಜಿಲ್ಲಾಧಿಕಾರಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಕೇಳಿದರೂ ನೀಡದೇ ಸರಕಾರ ಹಾಗೂ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಆದೇಶ ನೀಡಿರುವುದನ್ನು ಖಂಡಿಸುತ್ತೇನೆ. ಸಲಹೆ ಪಡೆದು ಕಾನೂನಿನ ಮೂಲಕವೇ ಹೋರಾಡಿ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪಕ್ಷೇತರನಾಗಿ ಆಯ್ಕೆಯಾಗಿದ್ದು, ನಾನು ಯಾವುದೇ ರೀತಿ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ಪಪಂ ಅಧಿಕಾರಕ್ಕೆ ಯಾವುದೇ ಪಕ್ಷಕ್ಕೂ ಬಹುಮತವಿಲ್ಲದ ಕಾರಣ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಮೀಟಿಂಗ್‍ಗಳಲ್ಲಿ ಭಾಗಿಯಾಗಿದ್ದು ನಿಜ. ಆದರೆ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಹಿ ಹಾಕಿಲ್ಲ. ಆದರೂ, ಅಧಿಕಾರ ಸಿಗದ ಹತಾಶೆಯಲ್ಲಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನನ್ನ ಸಹಿ ಕೊಟ್ಟಿ ಮಾಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ದೂರು ದಾಖಲಿಸಿಕೊಂಡಿಲ್ಲ. ಆದ್ದರಿಂದ ಹಿರೇಕೆರೂರ ಕೋರ್ಟಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಆದ್ದರಿಂದ ನನಗೆ ಕಾನೂನಿನ ಮೂಲಕ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.ಪಪಂ ಸದಸ್ಯ ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ರವಿ ಹದಡೇರ, ಮುಖಂಡರಾದ ನಾಗರಾಜ ದ್ಯಾವಕ್ಕಳವರ, ರೋಹಿತ್ ಮುದಿಯಪ್ಪನವರ ಹಾಗೂ ಮುಂತಾದವರು ಇದ್ದರು.