ಕನ್ನಡಪ್ರಭ ವಾರ್ತೆ ತುಮಕೂರು
ಶನಿವಾರ ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ರಾಜ್ಯ ಕಿವುಡರ ಕ್ರೀಡಾ ಒಕ್ಕೂಟ ಏರ್ಪಡಿಸಿದ್ದ ಒಕ್ಕೂಟದ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕರು, ವಿಕಲಚೇತನರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ವಿಕಲಚೇತನರನ್ನು ಎಲ್ಲರ ಜೊತೆ ಸಮಾಜದ ಮುಖ್ಯವಾಹಿನಿಗೆ ಕರೆತರಲು ಎಲ್ಲರೂ ಕಾಳಜಿವಹಿಸಬೇಕು ಎಂದರು.
ಸಾಧನೆ ಮಾಡಿದ ಕಿವುಡ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಂಗವೈಕಲ್ಯದ ನಡುವೆಯೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ನಿಮ್ಮ ಸಾಧನೆ ನಮಗೆ ಪ್ರೇರಣೆಯಾಗುತ್ತದೆ. ನಾವೂ ಏನನ್ನಾದರೂ ಸಾಧಿಸಲು ಮತ್ತಷ್ಟು ಹುರುತು ಬರುತ್ತದೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.ನಗರದಲ್ಲಿ ಉದ್ಯೋಗ ಹಬ್ಬ ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ನಗರದಲ್ಲಿ ಉದ್ಯೋಗ ಹಬ್ಬ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆಸಕ್ತ, ಅರ್ಹ ವಿಕಲಚೇತನರು ಇದರ ಪ್ರಯೋಜನ ಪಡೆದು ಉದ್ಯೋಗ ಪಡೆಯಬಹುದು ಎಂದು ಶುಭಾ ಕಲ್ಯಾಣ್ ಹೇಳಿದರು.
ಭಾರತೀಯ ಕಿವುಡರ ಕ್ರೀಡಾ ಮಂಡಳಿ ಅಧ್ಯಕ್ಷ ವಿ.ಕುಮಾರ್, ಆಡಳಿತ ಮಂಡಳಿ ಸದಸ್ಯೆ ಶೋಭಾ ಗಣೇಶನ್, ರಾಜ್ಯ ಕಿವುಡರ ಸಂಘದ ಅಧ್ಯಕ್ಷ ಸುನಿಲ ಎಂ. ಕಂದೂರ, ಉಪಾಧ್ಯಕ್ಷ ಕಾಡಪ್ಪ ಬಿ. ಗುಡದಿನ್ನಿ, ಕಾರ್ಯದರ್ಶಿ ಜಿ.ಎಸ್. ನವೀನ್‌ಕುಮಾರ್, ಜಿಲ್ಲಾ ಕಿವುಡರ ಸಂಘದ ಕಾರ್ಯದರ್ಶಿ ಎಚ್.ಎಂ. ರವೀಶ್, ಸಲಹೆಗಾರರಾದ ಗಾಯತ್ರಿ ರವೀಶ್, ವಿವಿಧ ಘಟಕಗಳ ಮುಖಂಡರಾದ ಟಿ.ವಿ. ಮನೋಹರ್, ಜೆ.ವಿ.ಮಹೇಶ್ ಶರ್ಮಾ, ಎಂ.ಜಿ. ನಾಗೇಂದ್ರನ್, ಕೆ.ಎಸ್.ಉಮಾಶಂಕರ್, ಎಸ್.ಎಸ್. ದೇವರಾಜು ಮೊದಲಾದವರು ಭಾಗವಹಿಸಿದ್ದರು.