ರೆಸಾರ್ಟ್‌, ಹೋಮ್‌ ಸ್ಟೇಗಳು ಖಾಲಿ ಖಾಲಿ

KannadaprabhaNewsNetwork |  
Published : Mar 16, 2026, 01:00 AM ISTUpdated : Mar 16, 2026, 09:10 AM IST
Hotel

ಸಾರಾಂಶ

ಇಸ್ರೇಲ್-ಇರಾನ್ ಯುದ್ಧದ ಪರಿಣಾಮದಿಂದ ರಾಜ್ಯದ ಹಲವೆಡೆ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಮುಂದುವರಿದಿದ್ದು, ಹೋಟೆಲ್ ಉದ್ಯಮಕ್ಕೆ ಭಾರಿ ಸಮಸ್ಯೆಯಾಗಿದೆ. ಹಲವೆಡೆ ಹೋಟೆಲ್‌ನವರು ಕಟ್ಟಿಗೆ ಒಲೆ ಹೂಡಿ ಅಡುಗೆ ಮಾಡಲಾರಂಭಿಸಿದ್ದಾರೆ.

ಕೊಪ್ಪಳ : ಇಸ್ರೇಲ್-ಇರಾನ್ ಯುದ್ಧದ ಪರಿಣಾಮದಿಂದ ರಾಜ್ಯದ ಹಲವೆಡೆ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಮುಂದುವರಿದಿದ್ದು, ಹೋಟೆಲ್ ಉದ್ಯಮಕ್ಕೆ ಭಾರಿ ಸಮಸ್ಯೆಯಾಗಿದೆ. ಹಲವೆಡೆ ಹೋಟೆಲ್‌ನವರು ಕಟ್ಟಿಗೆ ಒಲೆ ಹೂಡಿ ಅಡುಗೆ ಮಾಡಲಾರಂಭಿಸಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೂ ಸಿಲಿಂಡರ್‌ ಕೊರತೆಯ ಬಿಸಿ ತಟ್ಟಿದ್ದು, ದಾಸೋಹಕ್ಕೆ ಮಠ, ದೇವಾಲಯಗಳು ಸೌದೆ ಒಲೆಯ ಮೊರೆ ಹೋಗುತ್ತಿವೆ. ರಾಜ್ಯದ ಪ್ರವಾಸಿ ಕೇಂದ್ರಗಳಿಗೂ ಗ್ಯಾಸ್‌ ಕೊರತೆಯ ಬಿಸಿ ತಟ್ಟಿದ್ದು, ರೆಸಾರ್ಟ್‌, ಹೋಮ್‌ ಸ್ಟೇಗಳು ಬಣಗುಡುತ್ತಿವೆ. ಈ ಮಧ್ಯೆ, ರಾಜ್ಯದ ಕೆಲವೆಡೆ ಅಡುಗೆ ಅನಿಲಕ್ಕೂ ಗ್ರಾಹಕರು ಪರದಾಡುವಂತಾಗಿದ್ದು, ಗ್ಯಾಸ್‌ ಏಜೆನ್ಸಿಗಳ ಮುಂದೆ ‘ಕ್ಯೂ’ ನಿಲ್ಲುವಂತಾಗಿದೆ.

ಭಣಗುಡುತ್ತಿವೆ ಪ್ರವಾಸಿ ತಾಣಗಳು

ಪ್ರವಾಸೋದ್ಯಮಕ್ಕೂ ಯುದ್ಧದ ಬಿಸಿ ತಟ್ಟಿದೆ. ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿನ ಹೋಟೆಲ್‌, ರೆಸಾರ್ಟ್, ಹೋಮ್‌ ಸ್ಟೇಗಳಲ್ಲಿ ಸಿಲಿಂಡರ್‌ ಕೊರತೆಯಿಂದಾಗಿ ಮೆನುಗಳಲ್ಲಿ ಕಟ್‌ ಮಾಡಲಾಗಿದೆ. ಮಿತ ಆಹಾರ ಮಾತ್ರ ಇರುವ ಹಿನ್ನೆಲೆಯಲ್ಲಿ, ತಮ್ಮಿಷ್ಟದ ಆಹಾರಗಳು ಇರದ ಹಿನ್ನೆಲೆಯಲ್ಲಿ, ಹೊಟೇಲ್ ಗಳು ಇರುತ್ತವೆಯೋ, ಇಲ್ಲವೋ ಎನ್ನುವ ಆತಂಕದಲ್ಲಿ ಪ್ರವಾಸಕ್ಕೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ವೀಕೆಂಡ್‌, ರಜಾ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತಿದ್ದ ಪ್ರವಾಸಿ ತಾಣಗಳಲ್ಲಿನ ಹೊಟೇಲ್, ರೆಸಾರ್ಟ್ ಗಳು ಈಗ ಬಣಗುಡುತ್ತಿವೆ.

ದಾಸೋಹಕ್ಕೂ ಸೌದೆ ಒಲೆ:

ಕೊಪ್ಪಳದ ಗವಿಸಿದ್ಧೇಶ್ವರ ಮಠದಲ್ಲಿ ಈಗಾಗಲೇ ಕಟ್ಟಿಗೆ ಒಲೆ ಬಳಕೆ ಮಾಡುತ್ತಿದ್ದು, ದಾಸೋಹಕ್ಕೆ ಸಮಸ್ಯೆ ಆಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶರಣ ಬಸವೇಶ್ವರ ದೇವಸ್ಥಾನದ ಅನ್ನದಾಸೋಹಕ್ಕೆ ಕೂಡ ಸೌದೆ ಒಲೆಯ ಬಳಕೆಯಾಗುತ್ತಿದೆ. ಹಾವೇರಿಯ ಹುಕ್ಕೇರಿ ಮಠದಲ್ಲಿ ವಿದ್ಯಾರ್ಥಿಗಳ ಬಿಸಿಯೂಟ, ಭಕ್ತರ ದಾಸೋಹಕ್ಕೆ ಸಂಕಷ್ಟ ಎದುರಾಗಿದ್ದು, ಸೌದೆ ಒಲೆಯ ಮೊರೆ ಹೋಗಲಾಗಿದೆ.ಅಡುಗೆ ಅನಿಲಕ್ಕೂ ಗ್ರಾಹಕರ ‘ಕ್ಯೂ’:

ಮಡಿಕೇರಿಯಲ್ಲಿ ಗ್ಯಾಸ್‌ ಏಜೆನ್ಸಿಗಳ ಮುಂದೆ ಸಿಲಿಂಡರ್‌ಗಾಗಿ ಜನ ಕ್ಯೂ ನಿಲ್ಲುತ್ತಿದ್ದಾರೆ. ಬಿಸಿಲಿನಲ್ಲೇ ಮಹಿಳೆಯರು, ವೃದ್ಧರು ಕಾದು ಸುಸ್ತಾಗಿ ಸರದಿ ಸಾಲಿನಲ್ಲೇ ಸಿಲಿಂಡರ್ ಮೇಲೆ ಕುಳಿತಿರುವ ದೃಶ್ಯ ಕಂಡು ಬರುತ್ತಿದೆ.

ಬೆಳಗಾವಿ ಜಿಲ್ಲೆ ರಾಯಭಾಗದಲ್ಲಿ ಏಜೆನ್ಸಿಗಳ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ವಿಜಯಪುರದಲ್ಲಿ ಗೋಳಗುಮ್ಮಟ ರಸ್ತೆಯ ಇಂಡಿಯಸ್ ಗ್ಯಾಸ್ ಎದುರು ಪೊಲೀಸ್‌ ಭದ್ರತೆಯಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಲಾಗುತ್ತಿದೆ. ಕಲಬುರಗಿ, ಕೊಪ್ಪಳ, ದಾವಣಗೆರೆ, ರಾಯಚೂರಲ್ಲೂ ಅಡುಗೆ ಅನಿಲಕ್ಕಾಗಿ ‘ಕ್ಯೂ’ ಕಂಡು ಬರುತ್ತಿದೆ.

ಹೋಟೆಲ್‌ಗಳಿಗೆ ಸಂಕಷ್ಟ

ಕೊಪ್ಪಳದಲ್ಲಿ ಆರೂಢ ಹೋಟೆಲ್ ಮಾಲೀಕ ಲಿಂಗರಾಜ ಅವರು, ತಮ್ಮ ಹೋಟೆಲ್ ಹಿಂದುಗಡೆ ಬಯಲಲ್ಲಿಯೇ ಕಟ್ಟಿಗೆ ಒಲೆ ಹೂಡಿ, ಅಡುಗೆ ಸಿದ್ಧತೆ ಮಾಡುತ್ತಿದ್ದಾರೆ. ತಮ್ಮ ಮೂರು ಹೋಟೆಲ್‌ಗೂ ಒಂದೇ ಸ್ಥಳದಲ್ಲಿ ಅಡುಗೆ ಸಿದ್ಧ ಮಾಡಿ, ಮೂರು ಹೋಟೆಲ್‌ಗಳಿಗೂ ಅಲ್ಲಿಂದಲೇ ಪೂರೈಕೆ ಮಾಡುತ್ತಿದ್ದಾರೆ. ಶಿವಮೊಗ್ಗದ ಇಲಿಯಾಸ್ ನಗರದ ಮುಖ್ಯರಸ್ತೆಯ ಅರ್ಫಾ ಹೋಟೆಲ್ ಮಾಲೀಕ ಮಕ್ಸೂದ್ ಅವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಹೋಟೆಲ್ ಬಂದ್ ಮಾಡುವ ಅನಿವಾರ್ಯತೆಯಿಂದ ಹೊರ ಬಂದು, ಬಿರಿಯಾನಿ, ಚಿಕನ್‌, ಸಮೋಸ ತಯಾರಿಕೆಗೆ ಇದ್ದಿಲು ಒಲೆಯ ಮೊರೆ ಹೋಗಿದ್ದಾರೆ. ದಾವಣಗೆರೆಯ ಬಹುತೇಕ ಹೋಟೆಲ್‌ಗಳಲ್ಲಿ ಸೌದೆ ಒಲೆ ಬಳಸುತ್ತಿದ್ದು, ದೋಸೆ ಬಿಟ್ಟು ಬೇರೆ ಐಟಮ್ ಸಿಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೋಟೆಲ್‌ಗಳಲ್ಲೂ ಕೇವಲ ದೋಸೆ ಐಟಮ್ ಮಾತ್ರ ಸಿಗುತ್ತಿದೆ.

ಎಲ್‌ಪಿಜಿ ಸಮಸ್ಯೆ ಇತ್ಯರ್ಥ ಕೋರಿ ಕೇಂದ್ರಕ್ಕೆ ಪತ್ರ:

ಅಡುಗೆ ಅನಿಲ ಅಭಾವ ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ರಾಜ್ಯ ಬಿಜೆಪಿಯವರು ರಾಜಕೀಯಕ್ಕೆ ಮಾತನಾಡುವ ಬದಲು ಎಲ್‌ಪಿಜಿ ಪೂರೈಕೆಗೆ ಕ್ರಮ ವಹಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈಗಾಗಲೇ ಉತ್ತರ ನೀಡಲಾಗಿದೆ. ಆಹಾರಕ್ಕಾಗಿ ಹೋಟೆಲ್ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ತವಾಗುತ್ತದೆ. ಹೀಗಾಗಿ ಕೇಂದ್ರ ಸಚಿವ ಹರದೀಪ್‌ಸಿಂಗ್‌ ಪುರಿ ಅವರಿಗೆ ಪತ್ರ ಬರೆದು ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸಲು ಪತ್ರ ಬರೆದಿದ್ದು, ಅವರು ಸಹ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮಾತ್ರ ಎಲ್‌ಪಿಜಿ ಸಮಸ್ಯೆಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಬಿಜೆಪಿಯವರು ರಾಜಕೀಯವಾಗಿ ಮಾತನಾಡುವ ಬದಲು ಎಲ್‌ಪಿಜಿ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಕ್ರಮ ವಹಿಸಲಿ ಎಂದು ತಿರುಗೇಟು ನೀಡಿದರು.

ಗ್ಯಾಸ್‌ಗಾಗಿ ಪರದಾಡುತ್ತಿರುವ ಹೋಟೆಲ್ಸ್‌ಗೆ ಇಂದು ಸಿಹಿಸುದ್ದಿ?ಅನಿಲ ಸಿಲಿಂಡರ್‌ ಕೊರತೆಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸೋಮವಾರ ಅನಿಲ ಕಂಪನಿಗಳ ಜೊತೆ ಸಭೆ ನಡೆಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ 4 ಗಂಟೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನೇತೃತ್ವದಲ್ಲಿ ಗ್ಯಾಸ್‌ ಕಂಪನಿಗಳ ಜೊತೆ ಸಭೆ ನಡೆಯಲಿದೆ. ಹೋಟೆಲ್‌ಗಳಿಗೆ ಸ್ವಲ್ಪ ಸಿಲಿಂಡರ್‌ ನೀಡುವ ಬಗ್ಗೆ ಮಾತನಾಡಲಾಗುವುದು. ಅನಿಲ ತುಂಬಿದ ಎರಡು ಹಡಗುಗಳು ದೇಶಕ್ಕೆ ಆಗಮಿಸಿರುವುದರಿಂದ ಅನುಕೂಲ ಆಗುತ್ತದೆ ಎಂದು ಭಾವಿಸಿದ್ದೇವೆ. ಇನ್ನೂ ಯುದ್ಧ ನಿಂತಿಲ್ಲ. ಮಿತವ್ಯಯವಾಗಿ ಗ್ಯಾಸ್‌ ಬಳಸಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ
ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರಕ್ಕೆ ಸಂಪುಟ ಅಸ್ತು