ತ್ಯಾಜ್ಯ ವಿಲೇ ಘಟಕ ಅವ್ಯವಸ್ಥೆ: ಸ್ವಯಂ ಪ್ರೇರಿತ ದೂರು

KannadaprabhaNewsNetwork |  
Published : Jul 04, 2026, 02:30 AM IST
ಚಿತ್ರ : 3ಎಂಡಿಕೆ2 :  ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ನಗರದ ಹೊರ ವಲಯದ ಸ್ಟೀವರ್ಟ್ ಹಿಲ್ ಬಳಿ ಸಂಗ್ರಹಿಸಲಾಗುವ ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಶುಕ್ರವಾರ ಭೇಟಿ ನೀಡಿದರು.

ಮಡಿಕೇರಿ: ನಗರದ ಹೊರ ವಲಯದ ಸ್ಟೀವರ್ಟ್ ಹಿಲ್ ಬಳಿ ಸಂಗ್ರಹಿಸಲಾಗುವ ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಶುಕ್ರವಾರ ಭೇಟಿ ನೀಡಿದರು.

ಕಸ ವಿಲೇವಾರಿ ಘಟಕದ ಗೇಟ್ ಬಳಿಗೆ ಇಳಿಯುತ್ತಿದ್ದಂತೆ ರಸ್ತೆಯನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ, ಇನ್ನು ಕಸವನ್ನು ಹೇಗೆ ವಿಲೇವಾರಿ ಮಾಡುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸವಿಲೇವಾರಿ ಸಮಪರ್ಕವಾಗಿ ನಿರ್ವಹಿಸದಿರುವ ಹಿನ್ನೆಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದರು. ಕನಿಷ್ಠ ಓಡಾಡಲು ರಸ್ತೆ ಸುಗಮವಾಗಿರಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಸವನ್ನು ವಿಲೇವಾರಿ ಮಾಡುವುದು ಹೀಗೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಸ ವಿಲೇವಾರಿ ಘಟಕ ಕೇಂದ್ರ ನಿರ್ವಹಣೆ ಕಳಪೆಯಿಂದ ಕೂಡಿದ್ದು, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುತ್ತಿಲ್ಲ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸಿಟ್ಟಾದರು.

ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಬೇಕು. ಆ ಕೆಲಸ ಇಲ್ಲಿ ಆಗುತ್ತಿಲ್ಲ. ಕಸದಿಂದ ಸೋರುವ ನೀರು ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು.

ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದಾಗಿ ಕಸದ ನೀರು ಬೋರ್‌ವೆಲ್, ತೊರೆಗಳ ಮೂಲಕ ಮಲೀನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮುನ್ನೆಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.

ಪರಿಸರ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ಗಳು ಗಮನಹರಿಸಬೇಕು. ಇಲ್ಲದಿದ್ದರೆ ಎಲ್ಲರ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಚ್ಚರಿಸಿದರು. ವೈದ್ಯಕೀಯ, ಪಶು ವೈದ್ಯಕೀಯ, ಕುಡಿಯುವ ನೀರು ಪೂರೈಕೆ ವಿಭಾಗ, ನಗರಸಭೆ ಹಾಗೂ ಪರಿಸರ ಇಲಾಖೆ ಸೇರಿದಂತೆ ಎಲ್ಲ ವಿಭಾಗದ ಎಂಜಿನಿಯರ್‌ಗಳು ಗಮನಹರಿಸಬೇಕು ಎಂದು ಕೆ.ಎನ್.ಫಣೀಂದ್ರ ನಿರ್ದೇಶನ ನೀಡಿದರು.

ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಸಮಾರೋಪಾದಿಯಲ್ಲಿ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಇಲ್ಲಿರುವ ಆರು ಎಕರೆ ಜಾಗ ಸಾಲುವುದಿಲ್ಲ. ಆದ್ದರಿಂದ ಬೇರೆ ಸ್ಥಳಗಳಲ್ಲಿ ಕಸ ವಿಲೇವಾರಿಗೆ ಜಾಗ ಕಾಯ್ದಿರಿಸಬೇಕು ಎಂದು ಸಲಹೆ ಮಾಡಿದರು.

ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಪ್ರದೇಶದ ಮನೆಗಳ ಮಾಹಿತಿ ಪಡೆಯಬೇಕು. ಶುಚಿತ್ವ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕಸ ವಿಲೇವಾರಿ ಘಟಕ ಸ್ಥಳದಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಬಳಿಕ ನಗರದ ಮಾರುಕಟ್ಟೆ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಕೆ.ಎನ್.ಫಣೀಂದ್ರ ಅವರು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆಯೇ ಎಂದು ಮಾಹಿತಿ ಪಡೆದರು. ಮಾರುಕಟ್ಟೆಯಲ್ಲಿ ಮಳೆ ನೀರು ಬರದಂತೆ ಎಚ್ಚರವಹಿಸಬೇಕು. ಗಾಳಿ-ಬೆಳಕು ಬರುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಶೌಚಾಲಯ ಸುಂದರವಾಗಿರಬೇಕು. ಗಡಿಯಾರ ಅಳವಡಿಸುವಂತೆ ಸಲಹೆ ಮಾಡಿದರು. ನಿಲ್ದಾಣದಲ್ಲಿದ್ದ ವೃದ್ದೆಯೊಬ್ಬರು ಮದೆನಾಡು, ಬೆಟ್ಟತ್ತೂರು, ಕಾಟಕೇರಿಗೆ ಹೆಚ್ಚುವರಿ ಬಸ್ಸು ಸಂಚರಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ಗುರುವಾರ ಕುಶಾಲನಗರ ಬಳಿಯ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ಮತ್ತು ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು. ಹಾಸ್ಟೆಲ್ ವಾತಾವರಣ ಚೆನ್ನಾಗಿದೆ. ಆದರೆ ಹೊಸ ಹಾಸಿಗೆ ಮತ್ತು ಹೊದಿಕೆ ನೀಡಬೇಕು. ಸ್ನಾನದ ಮನೆ ಮತ್ತು ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಲಾಗಿದೆ ಎಂದರು.

ಕಸವಿಲೇವಾರಿ ಘಟಕ ಸರಿಯಾದ ನಿರ್ವಹಣೆ ಆಗದಿರುವುದರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಹೇಳಿದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಾಧಿಕಾರಿ ಅಭಿಷೇಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಲೋಕಾಯುಕ್ತ ಎಸ್ಪಿ ಉದೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ತಹಶೀಲ್ದಾರ್ ಶ್ರೀಧರ, ನಗರಾಭಿವೃದ್ಧಿ ಯೋಜನಾ ಯೋಜನಾ ನಿರ್ದೇಶಕರಾದ ಮಂಜುನಾಥ ರಾಮಣ್ಣ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪರಿಸರ ಅಧಿಕಾರಿ ಮಹೇಶ್ವರಿ ಸಿಂಗ್, ಎಇಇ ಸತೀಶ್ ಇತರರು ಹಲವು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್: ಇಲಾಖೆ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ
ಬೆಳೆ ವಿಮೆ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಕೋಟ ಪತ್ರ