ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಉಡುಪಿ ಜಿಲ್ಲೆಯಲ್ಲಿ ವೇಗವಾಗಿ ನಡೆಯುತ್ತಿದ್ದು, ಇದರ ಹೊಣೆ ಹೊತ್ತಿರುವ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಮೂಲ ಕರ್ತವ್ಯಗಳ ಜೊತೆಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ರಾಂ ಅಜೆಕಾರು ಕಾರ್ಕಳಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಉಡುಪಿ ಜಿಲ್ಲೆಯಲ್ಲಿ ವೇಗವಾಗಿ ನಡೆಯುತ್ತಿದ್ದು, ಇದರ ಹೊಣೆ ಹೊತ್ತಿರುವ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಮೂಲ ಕರ್ತವ್ಯಗಳ ಜೊತೆಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ವಿವಿಧ ಇಲಾಖೆಗಳ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿರುವ ಬಗ್ಗೆ ಚರ್ಚೆ ಆರಂಭವಾಗಿದೆ.ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,112 ಬೂತ್ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರವಾರು ಬೈಂದೂರು- 246, ಕುಂದಾಪುರ- 222, ಉಡುಪಿ-226, ಕಾರ್ಕಳ- 209 ಹಾಗೂ ಕಾಪು -209 ಬಿಎಲ್‌ಒಗಳಿದ್ದಾರೆ. ಜಿಲ್ಲೆಯ ಒಟ್ಟು 10, 64, 524 ಮತದಾರರ ಮಾಹಿತಿ ಪರಿಷ್ಕರಿಸುವ ಕಾರ್ಯ ನಡೆಯುತ್ತಿದ್ದು, ಜೂನ್ 2026ರ ಆರಂಭದ ವೇಳೆಗೆ ಸುಮಾರು 92.55 ಶೇ.ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಶಿಕ್ಷಕರು ಬಿಎಲ್‌ಒಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 9.15 ಗಂಟೆಯೊಳಗೆ ಶಾಲೆಗೆ ಹಾಜರಾಗಿ ಮೊಬೈಲ್ ಆ್ಯಪ್‌ನಲ್ಲಿ ಫೇಸ್ ಕ್ಯಾಪ್ಚರ್ ಮೂಲಕ ಚೆಕ್-ಇನ್ ಮಾಡಬೇಕು. ಸಂಜೆ 4.30ಕ್ಕೆ ಚೆಕ್-ಔಟ್ ಮಾಡಿ ವರದಿ ನವೀಕರಿಸಬೇಕಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪಾಠ ಬೋಧನೆ, ಅಕ್ಷರದಾಸೋಹ, ವಿವಿಧ ಸರ್ಕಾರಿ ಆನ್‌ಲೈನ್ ವರದಿಗಳು ಹಾಗೂ ಶಾಲೆಯ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಈ ನಡುವೆ ಎಸ್‌ಐಆರ್ ಕಾರ್ಯಕ್ಕಾಗಿ ಮನೆಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಜವಾಬ್ದಾರಿಯೂ ಸೇರಿದೆ. ಶಾಲಾ ಸಮಯದಲ್ಲಿ ಎಸ್‌ಐಆರ್ ಕಾರ್ಯ ನಿರ್ವಹಿಸಲು ಪ್ರತ್ಯೇಕ ಆದೇಶವಿಲ್ಲದಿದ್ದರೂ ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳಿಸುವ ಒತ್ತಡ ಇರುವುದರಿಂದ ಶಿಕ್ಷಕರು ಹೆಚ್ಚುವರಿ ಸಮಯ ಮೀಸಲಿಡಬೇಕಾಗಿದೆ.500ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಸಹ ಬಿಎಲ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಪೂರ್ವ ಪ್ರಾಥಮಿಕ ಶಿಕ್ಷಣ, ಮಕ್ಕಳ ಆರೋಗ್ಯ ಮೇಲ್ವಿಚಾರಣೆ, ಲಸಿಕಾ ಕಾರ್ಯಕ್ರಮ, ‘ಪೋಷಣ್ ಟ್ರ್ಯಾಕರ್’ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸುವುದು ಹಾಗೂ ಮನೆಮನೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸುವ ಜವಾಬ್ದಾರಿಗಳ ಜೊತೆಗೆ ಎಸ್‌ಐಆರ್ ಕರ್ತವ್ಯ ನಿರ್ವಹಿಸಬೇಕಾಗಿದೆ.

ಜಿಲ್ಲೆಯ 115 ಗ್ರಾಮ ಆಡಳಿತಾಧಿಕಾರಿಗಳು ಎಸ್‌ಐಆರ್ ಕಾರ್ಯದಲ್ಲಿ ಬಿಎಲ್‌ಒಗಳ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಜತೆಗೆ ಬೆಳೆ ಸಮೀಕ್ಷೆ, ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಪಿಂಚಣಿ ಪರಿಶೀಲನೆ, ಪೌತಿ ಆಂದೋಲನ ಸೇರಿದಂತೆ ದೈನಂದಿನ ಸರ್ಕಾರಿ ಸೇವೆಗಳನ್ನೂ ನಿರ್ವಹಿಸಬೇಕಾಗುತ್ತಿದೆ. ಈ ಕಾರಣದಿಂದ ಹಲವು ಅಧಿಕಾರಿಗಳು ಬೆಳಗ್ಗೆಯಿಂದ ರಾತ್ರಿ ತನಕ ನಿರಂತರವಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಎಸ್‌ಐಆರ್ ಕಾರ್ಯವು ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದರೂ, ಮೂಲ ಕರ್ತವ್ಯಗಳ ಜೊತೆಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿರುವುದರಿಂದ ಸಿಬ್ಬಂದಿಯ ಕಾರ್ಯಭಾರ ಹೆಚ್ಚಾಗಿದೆ. ವಿಶೇಷವಾಗಿ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಎಲ್ಲಾ ಬಿಎಲ್‌ಒಗಳಿಗೆ ಒಒಡಿ ಸೌಲಭ್ಯವು ನೀಡಲಾಗುತ್ತಿದೆ.ಶೈಕ್ಷಣಿಕ ವ್ಯವಸ್ಥೆಯೊಂದಿಗೆ ವಿಶೇಷ ತೀವ್ರ ಪರಿಷ್ಕರಣೆಗೆ ಎಲ್ಲಾ ಬಿಎಲ್‌ಒಗಳು ಆದ್ಯತೆ ನೀಡಬೇಕು.-ಸ್ವರೂಪ ಟಿ‌.ಕೆ., ಉಡುಪಿ ಜಿಲ್ಲಾಧಿಕಾರಿ.