ಜನಪದ ಗುರ್ಜಿ ಆಟದಲ್ಲಿ ಎಲ್ಲರೂ ಸೇರಿಕೊಂಡು ಒಬ್ಬ ಯುವಕನನ್ನು ಆಯ್ಕೆ ಮಾಡಿ ಆತನ ತಲೆಯ ಮೇಲೆ ನೀರನ್ನು ಸುರಿಯಲಾಗುತ್ತದೆ.
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಆಕಾಶದಲ್ಲಿ ಮೋಡಗಳಿದ್ದರೂ ಮಳೆಯಿಲ್ಲ. ಹೊಲಗಳಲ್ಲಿ ಮೊಳಕೆಯೊಡೆದ ಬೆಳೆಗಳು ನೀರಿನ ಕೊರತೆಯಿಂದ ಬಾಡಲಾರಂಭಿಸಿವೆ. ಸಮಯಕ್ಕೆ ಮಳೆ ಸುರಿಯದೇ ಅನ್ನದಾತ ಆತಂಕಕ್ಕೆ ಒಳಗಾಗಿರುವ ಹಿನ್ನೆಲೆ ತಾಲೂಕಿನ ಅಡವಿಭಾವಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯುವಕರು ಸಂಪ್ರದಾಯಬದ್ಧ ಗುರ್ಜಿ ಆಟ ನಡೆಸುವ ಮೂಲಕ ಮಳೆರಾಯನಿಗೆ ಮೊರೆ ಹೋಗಿದ್ದು, ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಜನಪದ ಆಚರಣೆ ಇಂದಿಗೂ ಗ್ರಾಮೀಣ ಸಮಾಜದಲ್ಲಿ ತನ್ನ ವೈಶಿಷ್ಟ್ಯ ಉಳಿಸಿಕೊಂಡಿದೆ.
ಜನಪದ ಗುರ್ಜಿ ಆಟದಲ್ಲಿ ಎಲ್ಲರೂ ಸೇರಿಕೊಂಡು ಒಬ್ಬ ಯುವಕನನ್ನು ಆಯ್ಕೆ ಮಾಡಿ ಆತನ ತಲೆಯ ಮೇಲೆ ನೀರನ್ನು ಸುರಿಯಲಾಗುತ್ತದೆ. ಬಳಿಕ ಅಂಚಿನ ಮೇಲೆ ಗೋಮಾತೆಯ ಸಗಣಿಯಿಂದ ಹುಂಡಿಯಾಕಾರದ ಗುರ್ಜಿ ರೂಪಿಸಿ ಅದರ ಮಧ್ಯೆ ಕರಿಕೆ ಹುಲ್ಲನ್ನು ನೆಟ್ಟು ತಲೆಯ ಮೇಲೆ ಇಡಲಾಗುತ್ತದೆ. ನಂತರ ಯುವಕರ ತಂಡ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸಂಪ್ರದಾಯದ ಹಾಡು ಹಾಡುತ್ತಾ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತದೆ.
ಪ್ರತಿ ಮನೆಯವರು ಗುರ್ಜಿ ಹೊತ್ತ ಯುವಕನ ತಲೆಯ ಮೇಲೆ ನೀರು ಸುರಿದು, ಅಕ್ಕಿ, ಜೋಳ, ಬೇಳೆ, ಧಾನ್ಯ ಹಾಗೂ ಇತರ ಆಹಾರ ಪದಾರ್ಥ ದಾನವಾಗಿ ನೀಡುತ್ತಾರೆ. ಇದು ಕೇವಲ ಆಚರಣೆಯಲ್ಲ, ಪ್ರಕೃತಿಯ ಮೇಲಿನ ಭಕ್ತಿ ಮತ್ತು ಸಮುದಾಯದ ಸಹಬಾಳ್ವೆಯ ಸಂಕೇತವಾಗಿದೆ.
ಸಂಸ್ಕೃತಿ ಉಳಿಸಿಕೊಂಡ ಗ್ರಾಮ: ತಂತ್ರಜ್ಞಾನ ಯುಗದಲ್ಲೂ ಗ್ರಾಮೀಣ ಸಂಸ್ಕೃತಿ, ಜನಪದ ಆಚರಣೆಗಳು ಮತ್ತು ಪ್ರಕೃತಿ ಆರಾಧನೆ ಜೀವಂತವಾಗಿರುವುದಕ್ಕೆ ಅಡವಿಭಾವಿಯ ಗುರ್ಜಿ ಆಟವೇ ಸಾಕ್ಷಿಯಾಗಿದೆ.
ಮಳೆಯ ನಿರೀಕ್ಷೆಯಲ್ಲಿರುವ ರೈತನ ಕಣ್ಣಲ್ಲಿ ಈ ಆಚರಣೆ ಕೇವಲ ಸಂಪ್ರದಾಯವಲ್ಲ; ಅದು ಬದುಕಿನ ಮೇಲಿನ ಭರವಸೆ, ಭಕ್ತಿ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕವಾಗಿದೆ.
ಗ್ರಾಮ ಸುತ್ತಾಟದ ನಂತರ ಯುವಕರು ಊರ ಹೊರವಲಯದಲ್ಲಿ ಸೇರಿ ಗುರ್ಜಿ ಪೂಜೆ ನೆರವೇರಿಸುತ್ತಾರೆ. ಗ್ರಾಮದಿಂದ ಸಂಗ್ರಹಿಸಿದ ಧಾನ್ಯ ಮತ್ತು ಆಹಾರ ಪದಾರ್ಥಗಳಿಂದ ಸಾಮೂಹಿಕ ಅಡುಗೆ ತಯಾರಿಸಿ ಎಲ್ಲರಿಗೂ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.
ಐದು ದಿನಗಳ ಕಾಲ ಗುರ್ಜಿ ಹೊತ್ತ ಯುವಕನಿಗೆ ಕೊನೆಯ ದಿನ ಹೊಸ ಉಡುಪು ನೀಡಿ ಗ್ರಾಮಸ್ಥರು ಸನ್ಮಾನಿಸುವುದು ಈ ಆಚರಣೆಯ ಮತ್ತೊಂದು ವಿಶೇಷವಾಗಿದೆ.
ಮಳೆಯೇ ರೈತನ ಜೀವನಾಡಿ. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಗುರ್ಜಿ ಆಟ ಪ್ರಕೃತಿಯ ಮೇಲಿನ ನಂಬಿಕೆಯ ಪ್ರತೀಕ. ಇನ್ನು ಮುಂದಾದರೂ ಮಳೆರಾಯ ಕೃಪೆ ತೋರಿ ಸಮೃದ್ಧ ಮಳೆ ಸುರಿದು ರೈತರ ಬದುಕು ಹಸನಾಗಲಿ ಎಂದು ಅಡವಿಬಾವಿ ಗ್ರಾಮದ ಯುವ ರೈತ ಮಲ್ಲಿಕಾರ್ಜುನ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.