ಕುಂದಾಪುರ: ಇಲ್ಲಿನ ಮರವಂತೆ ಗ್ರಾಮದ ಸೌಪರ್ಣಿಕ ನದಿಯಲ್ಲಿ ಮೋಜುಮಸ್ತಿಗೆ ತೆರಳಿದ್ದ ಪ್ರವಾಸಿಗರ ಬೋಟ್ ಮಗುಚಿ, ನೀರು ಪಾಲಾದ ಮೂವರನ್ನು ಸ್ಥಳೀಯರು ಮತ್ತು ಎನ್‌ಡಿಆರ್‌ಎಫ್ ತಂಡವು ರಕ್ಷಣೆ ಮಾಡಿದ ಘಟನೆ ಸೋಮವಾರ ನಡೆದಿದೆ.ಇಲ್ಲಿನ ವರಾಹಸ್ವಾಮಿ ದೇವಸ್ಥಾನದ ಮುಂಭಾಗ ಹರಿಯುವ ಈ ನದಿಯಲ್ಲಿ ದೋಣಿ ವಿಹಾರಕ್ಕೆ ಬಂದ 4 ಯುವಕರನ್ನು ಅಲ್ಲಿದ್ದ ಪೊಲೀಸರು ತಡೆದು ನದಿಯಲ್ಲಿ ನೀರು ಹೆಚ್ಚಿದ್ದು ಅಪಾಯವಿದೆ, ಆದ್ದರಿಂದ ದೋಣಿ ವಿಹಾರಕ್ಕೆ ನಿರ್ಬಂಧವಿದೆ ಎಂದು ಹೇಳಿದರೂ ಲೆಕ್ಕಿಸದೆ ಬೋಟು ಹತ್ತಿ ವಿಹಾರ ನಡೆಸುತ್ತಿದ್ದರು. ನದಿ ಮಧ್ಯೆ ಬೋಟ್ ಮಗುಚಿ ನಾಲ್ವರು ನೀರಿಗೆ ಬಿದ್ದರು. ಅವರಲ್ಲಿ ಒಬ್ಬಾತ ಈಜಿ ದಡ ಸೇರಿದ, ಮುಳುಗುತ್ತಿದ್ದ ಮತ್ತೊಬ್ಬನನ್ನು ಸ್ಥಳೀಯರು ಹಗ್ಗ ಎಸೆದು ದಡಕ್ಕೆ ಎಳೆದು ರಕ್ಷಿಸಿದರು. ಮಗದೊಬ್ಬನನ್ನು ಸ್ಥಳೀಯರು ನೀರಿನಿಂದ ಎಳೆದು ತಂದು ರಕ್ಷಿಸಿದರು. ಮತ್ತೊಬ್ಬ ನೀರಿನಲ್ಲಿ ನಾಪತ್ತೆಯಾದ.ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಎನ್‌ಡಿಆರ್‌ಎಫ್ ತಂಡದ ಮುಳುಗುತಜ್ಞರಿಂದ ಹುಡುಕಾಟ ಆರಂಭಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ನೀರಿನಲ್ಲಿ ಮುಳುಗಿದ ಯುವಕನನ್ನು ಮೇಲೆತ್ತಿ ಬೋಟ್‌ನಲ್ಲಿ ದಡಕ್ಕೆ ತಂದರು. ಆದರೆ ಆತನ ಉಸಿರಾಟ ಇಲ್ಲದಿರುವುದನ್ನು ಕಂಡು ಆತನಿಗೆ ಸಿ.ಪಿ.ಆರ್. ಮಾಡಿ ಕೃತಕ ಉಸಿರಾಟ ನೀಡಲಾಯಿತು, ನಂತರ ಯುವಕ ಉಸಿರಾಡಲಾರಂಭಿಸಿದ. ಆತನನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದರು.
ಇದು ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್.ಡಿ.ಆರ್.ಎಫ್. ವತಿಯಿಂದ ಸೌಪರ್ಣಿಕ ನದಿಯಲ್ಲಿ ನಡೆದ ಪ್ರವಾಹ - ಪ್ರಕೋಪದ ಸಂದರ್ಭದಲ್ಲಿ ಅಪಾಯಕ್ಕೊಳಗಾದವರ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನವಾಗಿತ್ತು.ಜನರು ಸೂಚನೆ ಪಾಲಿಸಬೇಕು-ಎಸಿ ರಶ್ಮಿ:ಈ ಸಂದರ್ಭ ಉಪಸ್ಥಿತರಿದ್ದ ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಮಾತನಾಡಿ, ಕೆಲವೊಮ್ಮೆ ಪರಿಣತಿ ಇಲ್ಲದೆ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪ್ರಾಣಾಪಾಯಗಳಾಗುವ ಸಾಧ್ಯತೆ ಇರುತ್ತವೆ. ಆದ್ದರಿಂದ ಅನುಭವ ಹಾಗೂ ಕುಶಲತೆ ಹೆಚ್ಚಿಸಲು ಇಂತಹ ಅಣಕು ಕಾರ್ಯಾಚರಣೆಗಳು ಸಹಾಯವಾಗುತ್ತದೆ ಎಂದರಲ್ಲದೆ ಸಾರ್ವಜನಿಕರು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ನೀಡಲಾಗುವ ಎಚ್ಚರಿಕೆಯ ಆದೇಶ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಲುಟಕರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ರವಿ, ಬೈಂದೂರು ತಹಸೀಲ್ದಾರ್ ರಾಮಚಂದ್ರಪ್ಪ, ತಾಪಂ ಇ.ಒ. ರಾಜ್‌ಕುಮಾರ್, ಬಿ.ಓ. ನಾಗೇಶ್ ನಾಯ್ಕ್, ಬೈಂದೂರು ಎನ್.ಡಿ.ಆರ್.ಎಫ್ 10 ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ವಿದ್ಯಾರ್ಥಿಗಳು, ಸ್ಥಳೀಯರು, ಮತ್ತಿತರರು ಉಪಸ್ಥಿತರಿದ್ದರು.