ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ

KannadaprabhaNewsNetwork |  
Published : Mar 30, 2024, 12:51 AM IST
ಷಷಷ | Kannada Prabha

ಸಾರಾಂಶ

ಜನತೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕನಿಷ್ಠ ಹತ್ತು ದಿನಗಳ ಕಾಲ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು, ಗ್ರಾಮಸ್ಥರು ಕಾಲುವೆಯ ಮೇಲೆ ನಿಂತು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಜನತೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕನಿಷ್ಠ ಹತ್ತು ದಿನಗಳ ಕಾಲ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು, ಗ್ರಾಮಸ್ಥರು ಕಾಲುವೆಯ ಮೇಲೆ ನಿಂತು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಲೂಕಿನ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆಯಲ್ಲಿ ಕೇವಲ ಮೂರು ದಿನ ನೀರು ಹರಿದು ಈಗ ಭಣಗುಡುತ್ತಿದೆ. ಜೊತೆಗೆ ಬೇಸಿಗೆ ಬಿಸಿಲು ಬೆಂಬತ್ತಿ ಕಾಡುತ್ತಿದೆ. ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಜನತೆ ಹಾಗೂ ಜಾನುವಾರು ನೀರಿಗಾಗಿ ಪರಿತಪ್ಪಿಸುವಂತಾಗಿದೆ.

ಈ ವೇಳೆ ಮಾತನಾಡಿ ರೈತ ಪ್ರಮುಖರಾದ ಚನ್ನಪ್ಪ ಕಾರಜೋಳ ಹಾಗೂ ಬಸವರಾಜ ಕಲ್ಲೂರ ಮಾತನಾಡಿ, ನಮ್ಮ ಭಾಗದ ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಗೆ ಕನಿಷ್ಟ 15 ದಿನವಾದರೂ ನೀರು ಹರಿಸಬೇಕಾಗಿತ್ತು. ಆದರೆ ಕೇವಲ 3 ದಿನ ಹರಿಸಿ ನಂತರ ನೀರು ನಿಲ್ಲಿಸಿಬಿಟ್ಟರು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಅದೇ ಮುಳವಾಡ ಕಾಲುವೆಯಲ್ಲಿ ಕಳೆದ 15 ದಿನಗಳಿಂದ ನೀರು ಹರಿದು ಪಡಗಾನೂರಿನ ಕ್ರಶರ್ ಕಲ್ಲುಗಣಿಗಳು ತುಂಬಿವೆ. ಆದರೆ ನಿವಾಳಖೇಡ ಗ್ರಾಮದಿಂದ ಮುಂದಿನ ನಾಗಠಾಣ ಉಪಕಾಲುವೆ ಮಾತ್ರ ನೀರಿಲ್ಲದೇ ಒಣಗಿದೆ ಎಂದರು.

ಮುಳವಾಡ ಕಾಲುವೆಗೆ ಸತತ ನೀರು ಆದರೆ ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಗೆ ನೀರಿಲ್ಲ ಯಾಕೆ? ಈ ತಾರತಮ್ಯ ಈ ಕುರಿತು ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಕೆಬಿಜೆಎನ್‌ಎಲ್ ಅಧಿಕಾರಿಗಳು ಯಾಕೆ ಉತ್ತರಿಸುತ್ತಿಲ್ಲ? ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕಾಲುವೆಗಳಿಗೆ ನೀರು ಬಂದರೆ ಕೆರೆ ಹಳ್ಳಗಳು, ಕೊಳವೆಭಾವಿ, ಭಾವಿಗಳು ಭರ್ತಿಯಾಗಿ ರೈತರಿಗೆ ಅನುಕೂಲವಾಗಲಿದೆ. ಕಾಲುವೆಗಳಿಗೆ ನೀರು ಬಿಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ. ತಕ್ಷಣವೇ ದೇವರಹಿಪ್ಪರಗಿ-ಗಂಗನಳ್ಳಿ ನಡುವಿನ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಿವಾಳಖೇಡ ಹಾಗೂ ಮುಳಸಾವಳಗಿ ಗ್ರಾಮಗಳ ರೈತರು ಮುಂದಿನ ಲೋಕಸಭೆಯ ಚುನಾವಣೆಯನ್ನು ಬಹಿಷ್ಕರಿಸುವ ನಿಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮಹಾದೇವಪ್ಪ ನಾಟೀಕಾರ, ಶಿವಶಂಕರ ಬಿರಾದಾರ, ಮಹಾದೇವಪ್ಪ ಭಂಟನೂರ, ಲಕ್ಷ್ಮಣ ಇಂಡಿ, ಕಲ್ಲಪ್ಪ ಹರಿಜನ, ಲಕ್ಷ್ಮಣ ದಳವಾಯಿ, ಸಂಗಪ್ಪ ಭಂಟನೂರ, ಚಿದಾನಂದ ದಳವಾಯಿ, ಸುಭಾಸ ಭಂಟನೂರ, ಮಲ್ಲಪ್ಪ ಅಗಸರ, ಹಣಮಂತ್ರಾಯ ಇಂಗಳಗಿ(ಮುಳಸಾವಳಗಿ) ಸೇರಿದಂತೆ ಇತರರು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!