ಗ್ಯಾರಂಟಿ ಸಭೆಗೆ ಗೈರಾಗುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಗ್ಯಾರಂಟಿ ಅಧ್ಯಕ್ಷ ಧರ್ಮಶೇಖರ್ ಎಚ್ಚರಿಕೆ

KannadaprabhaNewsNetwork |  
Published : Jun 02, 2025, 12:09 AM IST
ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಧರ್ಮಶೇಖರ್ ಮಾತನಾಡಿದರು. ಸತೀಶ್, ಜವನಪ್ಪ, ಸಿದ್ದೇಶ್, ಕುಮಾರ್, ಕಮಲಮ್ಮ, ಪರಮೇಶ್, ಸಿರಾಜ್,ರಮೇಶ್, ಪ್ರದೀಪ್, ಕೃಷ್ಣೇಗೌಡ, ಪುರುಷೋತ್ತಮ್ ಇದ್ದಾರೆ. | Kannada Prabha

ಸಾರಾಂಶ

ಕಾಟಾಚಾರಕ್ಕೆಂಬಂತೆ ಇತರೆ ಸಿಬ್ಬಂದಿಯನ್ನು ಕಳುಹಿಸಿ ಕೈ ತೊಳೆದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಧರ್ಮಶೇಖರ್ ಪ್ರಶ್ನಿಸಿದರು.ಎಂ.ಶಿವರ ಗ್ರಾಮಕ್ಕೆ ಒದಗಿಸಲಾಗಿದ್ದ ಬಸ್ ಸಂಚಾರ ಸೇವೆಯನ್ನು ರದ್ದುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನ ನಿಮಿತ್ತ ನಡೆಯುವ ಸಭೆಗಳಿಗೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡುವ ಜತೆಗೆ ಶಿಸ್ತು ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ನಿಧಿ ಹಾಗೂ ಕೆಎಸ್‌ಆರ್‌ಟಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳೇ ಬರುತ್ತಿಲ್ಲ. ಕಾಟಾಚಾರಕ್ಕೆಂಬಂತೆ ಇತರೆ ಸಿಬ್ಬಂದಿಯನ್ನು ಕಳುಹಿಸಿ ಕೈ ತೊಳೆದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಧರ್ಮಶೇಖರ್ ಪ್ರಶ್ನಿಸಿದರು.ಎಂ.ಶಿವರ ಗ್ರಾಮಕ್ಕೆ ಒದಗಿಸಲಾಗಿದ್ದ ಬಸ್ ಸಂಚಾರ ಸೇವೆಯನ್ನು ರದ್ದುಗೊಳಿಸಲಾಗಿದೆ. ಅರಸೀಕೆರೆ- ಹಾರನಹಳ್ಳಿ ಮಾರ್ಗವಾಗಿ ಜಾವಗಲ್‌ಗೆ ಪ್ರತಿನಿತ್ಯ ಸಂಚರಿಸುವ ಬಸ್ಸುಗಳು ಹಾರನಹಳ್ಳಿ ಹೊರ ವಲಯದಿಂದಲೇ ಹೋಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಎದುರಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಹೀಗಿದ್ದರೂ ಡಿಪೋ ವ್ಯವಸ್ಥಾಪಕರು ಸಭೆಗೆ ಬಂದಿಲ್ಲ.

ಇನ್ನು ಯುವನಿಧಿ ಯೋಜನೆಗೆ ಸಂಬಂಧಿಸಿ ಬೇರೆ ಯಾರೊಬ್ಬರೋ ಬಂದಿದ್ದು ನಿರ್ಲಕ್ಷ್ಯ ಸಹಿಸುವ ಪ್ರಶ್ನೆಯೇ ಇಲ್ಲ. ಉಭಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಜತೆಗೆ ಕ್ರಮಕ್ಕೆ ಶಿಫಾರಸು ಮಾಡುವ ಕುರಿತು ನಿರ್ಣಯ ಕೈಗೊಳ್ಳಿ ಎಂದು ಅಧ್ಯಕ್ಷ ಧರ್ಮಶೇಖರ್ ತಾಪಂ ಇಒ ಸತೀಶ್ ಅವರಿಗೆ ಸೂಚಿಸಿದರು.

ತಾಲೂಕಿನ ಗಂಡಸಿ ಹೋಬಳಿ ಚನ್ನಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಶಿವರಾಜು ಮಾತನಾಡಿ, ದೈನಂದಿನ ಕೆಲಸ ಬದಿಗೊತ್ತಿ ಅನ್ನಭಾಗ್ಯ ಯೋಜನೆಯಡಿ ದೊರೆಯುತ್ತಿರುವ ಪಡಿತರವನ್ನು ಪ್ರಾಮಾಣಿಕವಾಗಿ ವಿತರಿಸುತ್ತಿದ್ದೇವೆ. ಆದರೆ ಸರ್ಕಾರದಿಂದ ನಮಗೆ ನೀಡಬೇಕಾದ ಕಮಿಷನ್ ಮೊತ್ತವನ್ನು ಸಕಾಲಕ್ಕೆ ನೀಡುತ್ತಿಲ್ಲ. ಸದ್ಯ ದೊರೆಯುತ್ತಿರುವ ಕಮಿಷನ್ ಆಳುಗಳಿಗೆ ಸಂಬಳ ನೀಡಲು ಸಾಕಾಗುತ್ತಿಲ್ಲ. ಇದರ ನಡುವೆ ಗ್ರಾಹಕರಿಂದ ಹಣ ವಸೂಲಿ, ತೂಕದಲ್ಲಿ ಮೋಸ, ಖಾಲಿಗೋಣಿ ಚೀಲಕ್ಕೆ ಹಣ ಕೇಳಲಾಗುತ್ತಿದೆ ಎನ್ನುವ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಕನ್ನಹಾಕುವ ಕೆಳಮಟ್ಟಕ್ಕೆ ವಿತರಕರು ಇಳಿದಿಲ್ಲ. ಇಲ್ಲಸಲ್ಲದ ದೂರು ಹೇಳುವವರನ್ನು ಹೊರಗಿಟ್ಟು ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಸಭೆಯ ಗಮನಸೆಳೆದರು.

ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಅಧ್ಯಕ್ಷ ಧರ್ಮಶೇಖರ್ ಹಾಗೂ ಉಪಾಧ್ಯಕ್ಷ ಜವನಪ್ಪ ಉತ್ತರಿಸಿ, ಸಮಸ್ಯೆಯ ಗಂಭೀರತೆ ಅರಿಯುವ ದೃಷ್ಟಿಯಿಂದಲೇ ಪಡಿತರ ವಿತರಕರನ್ನು ಸಮಿತಿ ಸಭೆಗೆ ಆಹ್ವಾನಿಸಲಾಗಿದೆ. ವಾಸ್ತವ ಸ್ಥಿತಿಯನ್ನು ಸರ್ಕಾರ ಹಾಗೂ ಶಾಶಕರ ಗಮನಕ್ಕೆ ತಂದು ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದರು.

ತಾಪಂ ಇಒ ಸತೀಶ್, ಸದಸ್ಯರಾದ ಜಾಜೂರು ಸಿದ್ದೇಶ್, ಕೆಸಿಡಿ ಕುಮಾರ್, ಕಮಲಮ್ಮ, ಪರಮೇಶ್, ಸಿರಾಜ್,ರಮೇಶ್, ಪ್ರದೀಪ್, ಕೃಷ್ಣೇಗೌಡ, ಪುರುಷೋತ್ತಮ್, ಲೋಕೇಶ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು