ಕನ್ನಡಪ್ರಭ ವಾರ್ತೆ ಬೆಳಗಾವಿ
ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿದ ಪ್ರಕರಣ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಅವರ ತಂಡಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೇಹೊಸುರ ಸಾಥ್ ನೀಡಿದರು. ಮೃಗಾಲಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ರಂಗಸ್ವಾಮಿ ತಂಡ ಮಾಹಿತಿ ಪಡೆದರು. ಸದ್ಯ ಬದುಕುಳಿದಿರುವ 7 ಕೃಷ್ಣಮೃಗಗಳನ್ನು ಉಳಿಸಿಕೊಳ್ಳಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಪರಿಶೀಲಿಸಿದರು.ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರಂಗಸ್ವಾಮಿ, ಮರಣೋತ್ತರ ಪರೀಕ್ಷೆ ಮತ್ತು ಲ್ಯಾಬ್ ವರದಿ ಬಂದ ಮೇಲೆಯೇ ನಿಖರ ಮಾಹಿತಿ ತಿಳಿಯಲಿದೆ. ಎಲ್ಲೋ ಒಂದು ಕಡೆ ಲೋಪದೋಷ ಆಗಿರುತ್ತದೆ. ಅದು ತನಿಖೆ ಬಳಿಕವೇ ಗೊತ್ತಾಗಲಿದೆ. ಮೂಕ ಪ್ರಾಣಿಗಳ ಸಾವಿಗೆ ಯಾರೇ ಕಾರಣವಾದರೂ ಅವರ ಮೇಲೆ ಖಂಡಿತ ಕ್ರಮವಾಗುತ್ತದೆ ಎಂದು ರಂಗಸ್ವಾಮಿ ಸ್ಪಷ್ಟಪಡಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ನಿಂದ ಕೃಷ್ಣಮೃಗಗಳು ಸಾವನ್ನಪ್ಪುತ್ತಿವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಸ್ಥಳೀಯ ವೈದ್ಯರಿಂದ ಮಾಹಿತಿ ಪಡೆದು ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅವರು ಹೇಳುವ ಪ್ರಕಾರ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಸದ್ಯ ಬದುಕಿರುವ ಏಳು ಕೃಷ್ಣಮೃಗಗಳಿಗೂ ಸೋಂಕು ತಗುಲಿರುವ ಸಾಧ್ಯತೆಯಿದ್ದು, ಅವುಗಳ ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಇನ್ನುಳಿದ ಕೃಷ್ಣಮೃಗಗಳ ಜೀವ ಉಳಿಸಿಕೊಳ್ಳಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಸ್ಥಳೀಯ ವೈದ್ಯರು ತಜ್ಞರ ಸಲಹೆ ಪಡೆದು, ಅವರ ಜೊತೆಗೆ ಸಮಾಲೋಚನೆ ಮಾಡಿದ ಬಳಿಕವೇ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ತಜ್ಞ ವೈದ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
-----------ಕೋಟ್........
ಈಗಾಗಲೇ ನುರಿತ ವೈದ್ಯರ ತಂಡ ಭೇಟಿ ನೀಡಿ ಚಿಕಿತ್ಸೆ ನೀಡುವ ಕೆಲಸ ಮಾಡಿದೆ. ನಾನು ಇಲ್ಲಿ ವೈದ್ಯರ ಕೊರತೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಬ್ಯಾಕ್ಟೀರಿಯಾ ವೈರಸ್‌ನಿಂದ ಮೃತಪಟ್ಟಿವೆ ಎಂಬ ಮಾಹಿತಿ ನೀಡಿದ್ದಾರೆ. ಸಾವಿಗೆ ನಿಖರ ಅಂಶ ಇನ್ನೂ ಗೊತ್ತಾಗಿಲ್ಲ. ಈಗಾಗಲೇ ಸ್ಯಾಂಪಲ್ಸ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ನಮಗೆ ಮೇಲ್ನೋಟಕ್ಕೆ ತಪ್ಪಾಗಿದೆ ಅಂತ ಕಂಡುಬಂದಿದ್ದು, ಮೃಗಾಲಯ ಸಿಬ್ಬಂದಿ, ಅಧಿಕಾರಿ, ವೈದ್ಯರು ಯಾರೇ ಆದರೂ ಕೃಷ್ಣಮೃಗಗಳ ಸಾವಿಗೆ ಕಾರಣ ಗೊತ್ತಾದರೆ ಕ್ರಮ ಖಂಡಿತ.- ರಂಗಸ್ವಾಮಿ, ಅಧ್ಯಕ್ಷ, ಕರ್ನಾಟಕ ಮೃಗಾಲಯ