ಕುಡಿವ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತುಕ್ರಮ: ಅಕ್ಷಯ್ ಶ್ರೀಧರ್

KannadaprabhaNewsNetwork |  
Published : Feb 03, 2024, 01:47 AM IST
೨ಎಚ್‌ವಿಆರ್೧ | Kannada Prabha

ಸಾರಾಂಶ

ಬೇಸಿಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಪಂ ಸಿಇಒ ಅಕ್ಷಯ ಶ್ರೀಧರ ಅವರು ತಾಪಂ ಇಒ, ಪಿಡಿಒಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಕುಡಿಯುವ ನೀರಿನ ಸರಬರಾಜು ಕುರಿತು ಕೆಲವು ಸೂಚನೆ ನೀಡಿದರು.

ಹಾವೇರಿ: ಬೇಸಿಗೆ ಅವಧಿಯಲ್ಲಿ ಯಾವುದೇ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ಪೂರೈಸುವ ಹೊಣೆಗಾರಿಕೆ ಆಯಾ ಗ್ರಾಪಂಗಳ ಆದ್ಯ ಕರ್ತವ್ಯ. ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ್ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕೊಳವೆಬಾವಿಗಳಿಂದ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಅಂತರ್ಜಲಮಟ್ಟ ಕುಸಿದು ಕೊಳವೆಬಾವಿಗಳ ನೀರಿನ ಮಟ್ಟ ಕಡಿಮೆಯಾದಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಾಡಿಗೆ ಪಡೆದು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಬೇಕು. ಬಾಡಿಗೆ ಹಣ ಸಂದಾಯ ಮಾಡಲು ತಾಲೂಕು ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕು. ಖಾಸಗಿ ಕೊಳವೆಬಾವಿ ಮಾಲೀಕರಿಂದ ಕರಾರುಪತ್ರ ಮಾಡಿಕೊಂಡು ನೀರು ಪೂರೈಸಬೇಕು ಹಾಗೂ ನೀರಿನ ಮಟ್ಟ ಕಡಿಮೆ ಇರುವ ಕೊಳವೆಬಾವಿಗಳಿಗೆ ಫ್ಲಶಿಂಗ್ ಮಾಡಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು.ಪಿಡಿಒ, ಗ್ರಾಪಂ ಸಿಬ್ಬಂದಿ ಸಮಯ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಕೆಲವು ಸಿಬ್ಬಂದಿ ಸಾರ್ವಜನಿಕರ ಹಾಗೂ ಪ್ರತಿನಿಧಿಗಳ ಕರೆ ಸ್ವೀಕರಿಸದಿರುವ ಕುರಿತು ದೂರುಗಳು ಬಂದಿವೆ. ದೂರುಗಳು ಕಂಡು ಬಂದಲ್ಲಿ ಎಚ್ಚರಿಕೆ ನೀಡದೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು. ಗ್ರಾಪಂಗಳಲ್ಲಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡುವುದು ಕಡ್ಡಾಯ. ಈ ವಿಷಯವನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.

ಮನರೇಗಾ: ಮನರೇಗಾ ಯೋಜನೆಯಡಿ ಮುಂದಿನ ಆರು ತಿಂಗಳು ಅವಧಿಗೆ ಸಮಗ್ರ ಕ್ರಿಯಾ ಯೋಜನೆ ಅನುಮೋದಿಸಿಕೊಳ್ಳಲಾಗಿದೆ. ೧೬೨ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳನ್ನು ಗುರುತಿಸಿ ಸ್ಥಾಪಿಸಲಾಗಿದೆ. ಮುಂದಿನ ಸಾಲಿನಲ್ಲಿ ಜಿಲ್ಲೆಯಿಂದ ಪ್ರಮುಖವಾಗಿ ಐದು ಅಂಶಗಳಡಿ ಸಮಗ್ರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಲಾ ಶೌಚಾಲಯ, ಶಾಲಾ ಕಾಂಪೌಂಡ್ ನಿರ್ಮಾಣ ಮತ್ತು ಆಟದ ಮೈದಾನದ ಅಭಿವೃದ್ಧಿಪಡಿಸುವುದು, ವೈಯಕ್ತಿಕ ದನದ ದೊಡ್ಡಿ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಹಾಗೂ ನಿರುಗಾಲುವೆ ಹೂಳೆತ್ತುವುದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಾಗೂ ಈ ಯೋಜನೆಯಡಿ ಮಹಿಳಾ ಕೂಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ನೀಡುವ ಮೂಲಕ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳು: ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ, ಶಕ್ತಿ ಯೋಜನೆಗಳ ಅನುಷ್ಠಾನದಲ್ಲಿ ಅಗತ್ಯ ಮಾಹಿತಿ ಮತ್ತು ಸಹಕಾರವನ್ನು ನೀಡಿ ಯೋಜನೆಗಳನ್ನು ಯಶಸ್ವಿಗೊಳಿಸಲು ಕ್ರಮವಹಿಸಬೇಕು. ಡಿಜಿಟಲ್ ವಿಧಾನದ ಮೂಲಕ ತೆರಿಗೆ ವಸೂಲಾತಿ ಕೈಗೊಳ್ಳಬೇಕು. ತೆರಿಗೆದಾರರ ಮನವೊಲಿಸಿ ಬಾಕಿ ತೆರಿಗೆ ವಸೂಲಾತಿಗೆ ಕ್ರಮವಹಿಸುವುದರೊಂದಿಗೆ ಆಸ್ತಿಗಳ ದಾಖಲೀಕರಣ ಮಾಡುವಂತೆ ಸೂಚನೆ ನೀಡಿದರು.

ತಾಲೂಕು ಮತ್ತು ಗ್ರಾಪಂ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇ-ಹಾಜರಾತಿ ತಂತ್ರಾಂಶದ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಸರ್ಕಾರ ಈಗಾಗಲೇ ನಿರ್ದೇಶಿಸಿದಂತೆ ಇ-ಹಾಜರಾತಿ ಮೂಲಕವೇ ವೇತನ ಸಂದಾಯ ಮಾಡಲಾಗುವುದು. ಇನ್ನು ಮುಂದೆ ಕಡ್ಡಾಯವಾಗಿ ಎಲ್ಲ ಸಿಬ್ಬಂದಿ ಇ-ಹಾಜರಾತಿ ಮೂಲಕವೇ ಹಾಜರಾತಿ ನೀಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಣೂರು ವಿದ್ಯಾರಶ್ಮಿ ಕಾಲೇಜು: ಆರೋಗ್ಯ ಮಾಹಿತಿ ಕಾರ್ಯಕ್ರಮ
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ನಾಯಕರ ತರಬೇತಿ, ಕಿಟ್‌ ವಿತರಣೆ