ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ಕಾಮಗಾರಿ ನಡೆಯುತ್ತಿದೆ. ಆದರೆ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂಥವರನ್ನು ಕಪ್ಪುಪಟ್ಟಿಯಲ್ಲಿ ಇರಿಸಿ ಬೇರೆ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಯುದ್ಧ ಸಂದರ್ಭದಲ್ಲಿ ಡಾಂಬರಿನ ರೇಟು ಹೆಚ್ಚಾಗಿದ್ದು ಗುತ್ತಿಗೆದಾರರು ಕಾಲಾವಕಾಶ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಕಾರಣಗಳು ನಮಗೆ ಬೇಕಾಗಿಲ್ಲ. ನಮಗೆ ಕೆಲಸ ಬೇಕು ಎಂದರು.ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇರುವಂತೆ ವ್ಯವಸ್ಥೆ ಮಾಡಬೇಕು. ಅಂಗಡಿಗಳಲ್ಲಿ ರಸಗೊಬ್ಬರಕ್ಕೆ ರೈತರು ದುಬಾರಿ ಬೆಲೆ ನೀಡಬೇಕಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಇದ್ದಲ್ಲಿ ರೈತರಿಗೆ ನ್ಯಾಯಯುತ ದರದಲ್ಲಿ ರಸಗೊಬ್ಬರ ದೊರಕಲಿದೆ ಎಂದರು.
ತಂಬಾಕಿಗೆ ಸೂಕ್ತ ದರ ದೊರಕದೆ ತಂಬಾಕು ಬೆಳೆಗಾರರು ಹತಾಶರಾಗಿದ್ದು, ರೇಷ್ಮೆ ಬೆಳೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಿದಲ್ಲಿ ತಂಬಾಕು ಬೆಳೆಗಾರರು ರೇಷ್ಮೆ ಬೆಳೆಯತ್ತ ಮುಖ ಮಾಡಲಿದ್ದಾರೆ ಎಂದರು.
ತೋಟಗಾರಿಕಾ ಇಲಾಖೆಯ ಫಲಾನುಭವಿಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮತ್ತು ತೋಟಗಾರಿಕೆ ಅಧಿಕಾರಿ ಪ್ರಸಾದ್ ವಿರುದ್ಧ ಗರಂ ಆದ ಸಚಿವರು ಕೆಡಿಪಿ ಸಭೆಗೆ ಬರುವಾಗ ಸೂಕ್ತ ಮಾಹಿತಿ ತರಬೇಕು ಎನ್ನುವ ಪರಿಜ್ಞಾನ ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಖಾಸಗಿ ರಾಗಿ ಖರೀದಿದಾರರು ನೋಂದಣಿ ಮಾಡಿಕೊಂಡಿರುವ ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡುತ್ತಿರುವುದಾಗಿ ದೂರು ಕೇಳಿ ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ರಾವಂದೂರು ಮತ್ತು ಹಾರನಹಳ್ಳಿಗಳಲ್ಲಿ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಮಾರುಕಟ್ಟೆ ಯಾರ್ಡ್ ಮತ್ತು ಗೋದಾಮು ನಿರ್ಮಿಸಲು ಪರಿಶೀಲಿಸುವಂತೆ ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಸೂಚಿಸಿದರು.
ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಅರಣ್ಯ ಇಲಾಖೆಯ ಡಿಸಿಎಫ್ ಕಿರುತಂಬನ್, ತಾಪಂ ಇಒ ಡಿ.ಬಿ. ಸುನಿಲ್ ಕುಮಾರ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ ನಂಜಪ್ಪ. ಸಿಡಿಪಿಒ ವೀಣಾ, ಎಂಜಿನಿಯರ್‌ದಿನೇಶ್, ರಕ್ಷಿತ್, ಗೋಕುಲ್, ಮಲ್ಲಿಕಾರ್ಜುನ, ಲವ, ಸೈಜನ್ ಪೀಟರ್, ಕೀರ್ತನ್ ಪ್ರಭು, ವಿಜಯ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕೆಡಿಪಿ ಸಮಿತಿ ಸದಸ್ಯೆ ಕೆ.ಆರ್. ನಿರೂಪಾ, ಲಕ್ಷ್ಮೀನಾರಾಯಣ, ಮಹಮ್ಮದ್ ಶಫಿ, ಶೇಖರ್, ಮಹದೇವ್ ಮೊದಲಾದವರು ಇದ್ದರು.