ಕ್ರೀಡಾಪಟುಗಳು ಗುರಿ ಮುಟ್ಟಲು ಶಿಸ್ತು, ಏಕಾಗ್ರತೆ ಮುಖ್ಯ

KannadaprabhaNewsNetwork | Published : Jan 21, 2024 1:30 AM

ಸಾರಾಂಶ

ಕ್ರೀಡಾಪಟುಗಳು ತಮ್ಮ ಗುರಿ ಮುಟ್ಟಲು ಶಿಸ್ತು, ತಾಳ್ಮೆ, ಸಂಯಮ, ಏಕಾಗ್ರತೆ ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು. ನಗರದ ವರ್ತಕರ ಭವನದಲ್ಲಿ ಆಯೋಜಿಸಲಾಗಿದ್ದ ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳ್ಳುವುದರೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ದೇಹವನ್ನು ಸದೃಢಗೊಳಿಸಲು ಒಬ್ಬೊಬ್ಬರು ಒಂದೊಂದು ಮಾರ್ಗಗಳನ್ನು ಅನುಸರಿಸುತ್ತಾರೆ. ಯೋಗ, ವಾಕಿಂಗ್, ಕ್ರೀಡೆ ಹೀಗೆ ಹಲವಾರು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅಭಿಮತ । ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಕ್ರೀಡಾಪಟುಗಳು ತಮ್ಮ ಗುರಿ ಮುಟ್ಟಲು ಶಿಸ್ತು, ತಾಳ್ಮೆ, ಸಂಯಮ, ಏಕಾಗ್ರತೆ ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು. ನಗರದ ವರ್ತಕರ ಭವನದಲ್ಲಿ ಆಯೋಜಿಸಲಾಗಿದ್ದ ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳ್ಳುವುದರೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ದೇಹವನ್ನು ಸದೃಢಗೊಳಿಸಲು ಒಬ್ಬೊಬ್ಬರು ಒಂದೊಂದು ಮಾರ್ಗಗಳನ್ನು ಅನುಸರಿಸುತ್ತಾರೆ. ಯೋಗ, ವಾಕಿಂಗ್, ಕ್ರೀಡೆ ಹೀಗೆ ಹಲವಾರು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಗ್ರಾಮೀಣ ಮಟ್ಟದ ಪ್ರತಿಭಾವಂತರು, ಏನೂ ಸರಿಯಾದ ಸವಲತ್ತುಗಳಿಲ್ಲದೆ ರಾಷ್ಟ್ರಮಟ್ಟಕ್ಕೆ ಹೋಗಿ ಪ್ರಶಸ್ತಿಗಳನ್ನು ತಂದಿರುವುದು ಬಹಳ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಬೇಕಾಗುವಂತಹ ಎಲ್ಲಾ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸಹಕಾರ ನೀಡಲಿದೆ ಇದರ ಸದುಪಯೋಗ ಪಡೆದುಕೊಂಡು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತಾಗಿ ಎಂದು ಶುಭಹಾರೈಸಿದರು.

ಜಿಲ್ಲೆಯಲ್ಲಿ ಕ್ರೀಡೆ ವಿಚಾರಕ್ಕೆ ಬಂದರೆ, ನಮ್ಮ ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು ಹಾಗೂ ಅವರಿಗೆ ಬೇಕಾಗುವ ಸವಲತ್ತುಗಳು, ಅಭಿವೃದ್ಧಿಗೆ ಬೇಕಾಗುವಂತಹ ಮೂಲ ಸೌಕರ್ಯಗಳು, ಈಗ ಕ್ರೀಡಾ ಕ್ಷೇತ್ರ ಜಿಲ್ಲೆಯಲ್ಲಿ ಹೇಗಿದೆ, ಮುಂದೆ ಏನಾಗಬೇಕು ಏನೇನು ಅವಶ್ಯಕತೆಗಳಿವೆ ಹೀಗೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಜಿಲ್ಲೆಯನ್ನು ಕ್ರೀಡೆಯಲ್ಲಿ ನಂ.೧ ಸ್ಥಾನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.ಜಿಲ್ಲೆಯಲ್ಲಿ ಕ್ರೀಡೆ ಅಭಿವೃದ್ಧಿಗೆ ಸಿದ್ಧತೆಸಂತೆಮರಹಳ್ಳಿಯಲ್ಲಿ ಆರ್ಚರಿ ಶಾಲೆ ಇದೆ. ಜೊತೆಗೆ ಜಿಲ್ಲೆಗೆ ರೈಫೈಲ್ ಶೂಟಿಂಗ್‌ಗೆ ಸ್ಥಳಾವಕಾಶ ಹಾಗೂ ಕ್ರೀಡಾ ಇಲಾಖೆಗೆ ಉತ್ತಮ ತರಬೇತಿ ಪಡೆದ ಸಹಾಯಕ ನಿರ್ದೇಶಕರನ್ನು ಜಿಲ್ಲೆಗೆ ನೀಡುವಂತೆ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದರು. ಮುಂದಿನ ಆರ್ಥಿಕ ವರ್ಷದಲ್ಲಿ ಕ್ರೀಡಾ ಉತ್ತೇಜನಕ್ಕೆ ಏನೆಲ್ಲಾ ಅನುಕೂಲಗಳನ್ನು ಮಾಡಬಹುದು ಎಂಬ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕ್ರೀಡಾಪಟುಗಳಿಗೆ ಸಿಗುವಂತಹ ಸವಲತ್ತು, ಅನುಕೂಲಗಳು ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕ್ರೀಡಾಪಟುಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು. ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಚಾಮರಾಜನಗರ ಎಂದರೆ ನೆಟ್‌ಬಾಲ್ ಎನ್ನುವಷ್ಟರ ಮಟ್ಟಿಗೆ ಜಿಲ್ಲೆ ಹಾಗೂ ರಾಜ್ಯಕ್ಕೆ ಉತ್ತಮ ಕೀರ್ತಿ ತನ್ನಿ ಎಂದರು.

ಮಕ್ಕಳ ಪ್ರತಿಭೆ ಹೊರ ಬರಲು ಪೋಷಕರ ಪಾತ್ರ ವಹಿಸಬೇಕು:

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಇರಬೇಕು. ವಿದ್ಯೆ ಹಾಗೂ ಕ್ರೀಡೆ ಎರಡಕ್ಕೂ ಸಮಾನವಾಗಿ ಆದ್ಯತೆ ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಗ್ರಾಮೀಣ ಪ್ರದೇಶದ ಕಾಡಂಚಿನ ಗ್ರಾಮಗಳ, ಆಶ್ರಮ ಶಾಲೆಗಳು, ಹಾಗೂ ಗಿರಿಜನರ ಮಕ್ಕಳಿಗೂ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಹೊರಚೆಲ್ಲುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಬೇಕು. ಇದರಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಹೆಚ್ಚಾಗಿರಬೇಕು ಎಂದರು. ಗುರುಗಳು ನಿಮಗೆ ನಿಷ್ಕಲ್ಮಶವಾಗಿ ತಮ್ಮ ವಿದ್ಯೆಯನ್ನು ಧಾರೆ ಎರೆಯುತ್ತಾರೆ. ಗುರು ಶಿಷ್ಯರ ಭಾಂದವ್ಯ ಉತ್ತಮವಾಗಿರಬೇಕು. ಶಿಕ್ಷಕರು ನಿಮ್ಮನ್ನು ಒಂದು ಸುಂದರ ಶಿಲ್ಪವನ್ನಾಗಿ ಕೆತ್ತುವ ಶಿಲ್ಪಿಗಳಿದ್ದಂತೆ ಎಂದರು.

ನರ್ಗೀಸ್‌ ಬಾನು ಮಾತು:

ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ಮಾತನಾಡಿ, ಅವಕಾಶ ವಂಚಿತ ಹಾಗೂ ಎಲೆಮರೆ ಕಾಯಿಯಂತಿರುವ ಉಳಿದಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಈ ಅಸೋಸಿಯೇಷನ್ ಅನ್ನು ಪ್ರಾರಂಭಿಸಿದ್ದು, ಪ್ರತಿಯೊಬ್ಬ ಕ್ರೀಡಾಪಟುಗಳಿಗೂ ಕೂಡಾ ಅವಕಾಶ ಕಲ್ಪಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. ವಿದ್ಯಾರ್ಥಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚಲಾವಣೆ ಹಾಗೂ ಮೌಲ್ಯ ಎರಡೂ ಸಹ ಇರಬೇಕು. ಸತತ ಪ್ರಯತ್ನ ಮತ್ತು ಗುರಿ ಮುಟ್ಟುವ ಪ್ರಯತ್ನ ಇದ್ದರೆ ಚಲಾವಣೆಯೊಂದಿಗೆ ಹಾಗೂ ಮೌಲ್ಯವೂ ಕೂಡಾ ಇರುತ್ತದೆ ಎಂದು ಕಿವಿಮಾತು ಹೇಳಿದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ವೆಂಕಟನಾಗಪ್ಪ ಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಗಳನ್ನು ಮಾಡಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಂತಹ ಇಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕಾಗಿ ಕಳೆದ ಒಂದು ವರ್ಷದಿಂದ ಸತತ ಪ್ರಯತ್ನದ ಮೂಲಕ ಇಂದು ಸಂಘವನ್ನು ಅಸ್ತಿತ್ವಕ್ಕೆ ತಂದಿರುವುದು ಸಂತಸದ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್‌ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಅವರಿಗೆ ಸರಿಯಾದ ವೇದಿಕೆ ಸಿಗದೆ ಹಿಂದುಳಿದಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ಮೈದಾನಕ್ಕೆ ಕರೆತಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರನ್ನು ಹೆಮ್ಮರವಾಗಿ ಬೆಳೆಸುವಂತಹ ಕೆಲಸವನ್ನು ನಮ್ಮ ಅಸೋಸಿಯೇಷನ್ ಮಾಡುತ್ತದೆ ಎಂದರು. ಮೊಬೈಲ್‌ ಬಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್‌ಗಳಲ್ಲಿ ತೊಡಗಿಸಿಕೊಳ್ಳುವ ಒಂದೆ ಕಡೆ ಕುಳಿತು ಮೊಬೈಲ್ ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತ್ಯಜಿಸಿ ಹೊರಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮ್ಮ ಭವಿಷ್ಯ ಬದಲಾವಣೆಯಾಗಲಿದೆ ಎಂದರು. ಈ ವೇಳೆ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್.ಸಿ., ಖಜಾಂಚಿ ವಿಶ್ವನಾಥ್ ಎ.ಸಿ. ಕುದೇರು ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಟಿ.ಎಂ.ತಾಜುದ್ದೀನ್, ನಿವೃತ್ತ ಮುಖ್ಯ ಶಿಕ್ಷಕ ಹಾಗೂ ನಾಟಿ ವೈದ್ಯ ಎಸ್.ರಾಮಶೆಟ್ಟಿ, ಮೈಸೂರು ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಚ್.ಎಸ್., ಚಾಮರಾಜನಗರ ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್‌ನ ಉಪಾಧ್ಯಕ್ಷ ರಾಜೇಂದ್ರ.ಸಿ., ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್.ಬಿ, ಸಹ ಕಾರ್ಯದರ್ಶಿ ಸುರೇಶ್ ಕುಮಾರ್, ಖಜಾಂಚಿ ಮಹದೇವಸ್ವಾಮಿ ಎಂ.ಸಿ., ಸಂಘಟನಾ ಕಾರ್ಯದರ್ಶಿ ಮಧುಕುಮಾರ್ ಸಿ.ಎಂ., ಸದಸ್ಯರಾದ ದುಂಡಯ್ಯ, ಮಂಜುನಾಥ್ ಎಂ., ಲೋಕೇಶ್‌ವೈ.ಎನ್., ನಾಗೇಂದ್ರ ಸಿ., ಶಾಂತಕುಮಾರ್.ಎಲ್., ಶ್ರೀಕಂಠಸ್ವಾಮಿ, ಶ್ರೀಧರ್, ಗಂಗಪ್ಪ, ರೂಪಾ, ಲಕ್ಷ್ಮೀ ಇದ್ದರು.

Share this article