ಶಿಸ್ತು, ದೇಶಭಕ್ತಿ ಯುವಕರಲ್ಲಿ ಜಾಗ್ರತವಾಗಿರಬೇಕು-ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ

KannadaprabhaNewsNetwork |  
Published : Jun 27, 2024, 01:03 AM IST
ಫೋಟೋ : ೨೬ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ಜಗತ್ತಿನ ಹಿರಿದಾದ ಎರಡನೇ ಸೈನ್ಯ ಭಾರತದ್ದು ಎಂಬ ಹೆಮ್ಮೆಯ ಜೊತೆಗೆ ನಾವು ಸೈನ್ಯವನ್ನು ಸೇರಿ ಇನ್ನಷ್ಟು ಬಲಿಷ್ಠರಾಗಬೇಕಾದ ಅಗತ್ಯವೂ ಇದೆ ಎಂದು ಹಿರಿಯ ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.

ಹಾನಗಲ್ಲ: ಜಗತ್ತಿನ ಹಿರಿದಾದ ಎರಡನೇ ಸೈನ್ಯ ಭಾರತದ್ದು ಎಂಬ ಹೆಮ್ಮೆಯ ಜೊತೆಗೆ ನಾವು ಸೈನ್ಯವನ್ನು ಸೇರಿ ಇನ್ನಷ್ಟು ಬಲಿಷ್ಠರಾಗಬೇಕಾದ ಅಗತ್ಯವೂ ಇದೆ ಎಂದು ಹಿರಿಯ ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್‌ ಒಂದು ತಿಂಗಳ ಕಾಲ ಆಯೋಜಿಸಿದ ಯುವ ಮಾರ್ಗ ಅಗ್ನಿವೀರ ತರಬೇತಿ ಶಿಬಿರದ ಸಮಾರೋಪದ ಪ್ರೇರಕ ನುಡಿಗಳನ್ನಾಡಿದ ಅವರು, ಒಂದು ವರ್ಷಕ್ಕೆ ೪೫ ಸಾವಿರ ಅಗ್ನಿವೀರರ ಆಯ್ಕೆ ಸೈನ್ಯಕ್ಕೆ ಆಗುತ್ತದೆ. ಶಿಸ್ತು ಸಂಯಮ ಸಾಮಾಜಿಕ ಬದ್ಧತೆ ದೇಶಭಕ್ತಿ ಛಲ ಈಗಿನ ಯುವಕರಲ್ಲಿ ಜಾಗೃತವಾಗಿರಬೇಕು. ಸೈನ್ಯ ಸೇರಲು ಮಾನಸಿಕ ದೈಹಿಕ ಸಿದ್ಧತೆ ಬೇಕು. ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಕಾಲ ಯಾರಿಗೂ ಕಾಯವುದಿಲ್ಲ. ಸೈನ್ಯದ ಸೇವೆ ಅತ್ಯಂತ ಶ್ರಮದಾಯಕ ಎಂಬ ಅರಿವಿರಲಿ. ಈ ಮೂಲಕ ದೇಶಭಕ್ತಿಯ ಮಾದರಿ ಜೀವನ ನಿಮ್ಮದಾಗಲಿ. ಧೈರ್ಯ ಸಾಹಸದ ಜೀವನ ನಮ್ಮದಾಗಲಿ. ಕೀಳರಿಮೆ ಬೇಡ. ಕಿಮ್ಮತ್ತಿನ ಜೀವನ ನಡೆಸಿ ಎಂದರು.ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮಾತನಾಡಿ, ಸಮಾಜಕ್ಕಾಗಿ ಸೇವೆ ಸಲ್ಲಿಸುವವರನ್ನು ಟೀಕಿಸುವವರೆ ಇರುವಾಗ ಸೇವೆ ಮಾಡುವವರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ ಒಳ್ಳೆಯ ಮಾತುಗಳನ್ನಾಡಿ ಬೆಂಬಲಿಸಬೇಕಾಗಿದೆ. ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ. ಕೆಡುಕು ನಿಮಗೂ ಕೆಡುಕು. ಒಳ್ಳೆಯದು ಮಾಡಲಾಗದಿದ್ದರೆ ಸುಮ್ಮನಿದ್ದುಬಿಡಿ. ಸಮಾಜದಿಂದ ಕಿತ್ತುಕೊಂಡು ಬದುಕುವ ದೊಡ್ಡ ಸಂಖ್ಯೆ ಇರುವಾಗ ಅಗ್ನಿವೀರ ತರಬೇತಿಯನ್ನು ನೂರು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ನಡೆಸಿಕೊಟ್ಟ ಈ ಸಂಸ್ಥೆಗೆ ಎಲ್ಲರೂ ಋಣಿಯಾಗಿರಬೇಕು. ನಿಯತ್ತಿನ ದುಡಿಮೆಯಲ್ಲಿ ಸಮಾಜಕ್ಕಾಗಿ ನೀಡು ಮನಸ್ಸು ಇಚ್ಛಾಶಕ್ತಿಯನ್ನು ತೋರಿದ ಸಿದ್ದಲಿಂಗಪ್ಪ ಕಮಡೊಳ್ಳಿ ಹಾಗೂ ಅವರ ಬಳಗ ದೇಶದ ಹಿತಕ್ಕೆ ಸೈನಿಕರನ್ನು ಸಿದ್ಧಗೊಳಿಸುವ ಪುಣ್ಯದ ಕಾರ್ಯ ಮಾಡಿದ್ದಾರೆ ಎಂದರು.ಗದುಗಿನ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಕಷ್ಟಗಳನ್ನು ಮೆಟ್ಟಿ ನಿಂತು ದೇಶ ಸಮಾಜದ ಹಿತಕ್ಕೆ ಒಡ್ಡಿಕೊಳ್ಳುವ ನಿಯತ್ತು ಯುವಕರಲ್ಲಿ ಬೆಳೆಸಬೇಕಾಗಿದೆ. ಎಲ್ಲ ಪರಿಶ್ರಮಕ್ಕೂ ಫಲವಿದೆ. ಆದರೆ ಒಳ್ಳೆಯದಕ್ಕೆ ಪರಿಶ್ರಮಿಸುವ ಹಂಬಲ ನಮ್ಮದಾಗಬೇಕು. ಈಗ ಪ್ರಕೃತಿ ನಾಶದಿಂದ ನಾಡು ನಲುಗುತ್ತಿದೆ. ಭಾರತ ಸಮೃದ್ಧವಾಗಲು ಪರಿಸರ ರೈತ ಸೈನಿಕರನ್ನು ಚೆನ್ನಾಗಿ ಉಳಿಸಿಕೊಳ್ಳಬೇಕಾಗಿದೆ. ಈ ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ಆಂತರಿಕ ಶತ್ರುಗಳೇ ಅತ್ಯಂತ ಅಪಾಯಕಾರಿಯಾಗಿದ್ದಾರೆ. ಈಗ ದೇಶವನ್ನು ಒಳಗೂ ಹೊರಗೂ ಕಾಯುವ ದಿಟ್ಟ ನಾಯಕರನ್ನು ನಾವು ಬೆಂಬಲಿಸಬೇಕು. ದೇಶದ ಹಿತದಲ್ಲಿಯೆ ನಮ್ಮ ಹಿತವೂ ಇದೆ ಎಂಬ ಅರಿವು ಬೇಕು ಎಂದರು.ಉಚಿತ ತರಬೇತಿ ಮಹಾಪೋಷಕ ಸಂಚಾಲಕ ಸಿದ್ದಲಿಂಗಪ್ಪ ಕಮಡೊಳ್ಳಿ ವೇದಿಕೆಯಲ್ಲಿದ್ದರು. ಶಿರಸಿಯ ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ, ರಾಣಿಬೆನ್ನೂರು ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ರಾಣಿಬೆನ್ನೂರು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಮಾಜಿ ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಹಿರಿಯ ನ್ಯಾಯವಾದಿ ಬಿ.ಎಸ್.ದಳವಾಯಿ, ಸಮಾಜ ಸೇವಕ ರಾಮು ಯಳ್ಳೂರ ಅತಿಥಿಗಳಾಗಿದ್ದರು. ಅಗ್ನಿವೀರ ತರಬೇತುದಾರ, ನಿವೃತ್ತ ಸೈನಿಕ ರಾಘವೇಂದ್ರ ಕಾಳೆ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಶಾಂತವೀರೇಶ ನೆಲೋಗಲ್ಲ, ತರಬೇತಿಯ ಶಿಬಿರಾರ್ಥಿಗಳಾದ ಗಣೇಶ ಪರ್ಸಣ್ಣನವರ, ಚನಬಸಪ್ಪ ಮುಗಳಿಕಟ್ಟಿ, ಹನುಮಂತ ತಪಸಿ, ಪಂಪಾಪತಿ ಹಿರೇಮಠ, ನಾಗರಾಜ ಹುಲಗೂರ, ಮೃತ್ಯುಂಜಯ ಪೂಜಾರ, ವಿನೊದ ಹೊಸಕಟ್ಟೆ, ಚಂದನ್ ಈಳಿಗೇರ, ಧರ್ಮರಾಜ ಅಂಗಡಿ ಮಾತನಾಡಿದರು.ಅಮೃತಾ ಉಪ್ಪಲದಿನ್ನಿ ಭರತನಾಟ್ಯದ ಮೂಲಕ ಇಡೀ ಕಾರ್ಯಕ್ರಮಕ್ಕೆ ಸೊಗಸು ತಂದರು. ಶರಣಬಸಪ್ಪ ಸುಂಕದ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!