ಮಾದಕ ವಸ್ತುಗಳಿಗೆ ತಾಂತ್ರಿಕ, ವೈದ್ಯ ವಿದ್ಯಾರ್ಥಿಗಳೇ ಟಾರ್ಗೆಟ್: ಸಿಪಿಐ

KannadaprabhaNewsNetwork |  
Published : Jun 27, 2024, 01:03 AM IST
೨೬ಕೆಎಂಎನ್‌ಡಿ-೨ಮಂಡ್ಯ ತಾಲೂಕು ಸುಂಡಹಳ್ಳಿಯ ಕಾವೇರಿ  ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಆರಕ್ಷಕ ವೃತ್ತ ನಿರೀಕ್ಷಕ ಶಿವಪ್ರಸಾದ್ ಮಾತನಾಡಿದರು. | Kannada Prabha

ಸಾರಾಂಶ

ಮಾದಕ ವಸ್ತುಗಳ ಮಾರಾಟ, ಅಕ್ರಮ ಸಾಗಣೆಯಲ್ಲಿ ತೊಡಗುವುದು ಕೊಲೆಗಿಂತಲೂ ದೊಡ್ಡ ಅಪರಾಧ. ಏಕೆಂದರೆ, ಈ ಪ್ರಕರಣಗಳಲ್ಲಿ ಸರ್ಕಾರದ ಗೆಜೆಟೆಡ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನೇ ಸಾಕ್ಷಿಗಳನ್ನಾಗಿ ಪರಿಗಣಿಸಲಾಗುವುದು. ಈ ಪ್ರಕರಣಗಳಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಿಕ್ಕಿಹಾಕಿಕೊಂಡವರ ಜೀವನವೇ ಹಾಳಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣೆಗೆ ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳಲಾಗುತ್ತದೆ ಎಂದು ಆರಕ್ಷಕ ವೃತ್ತ ನಿರೀಕ್ಷಕ ಶಿವಪ್ರಸಾದ್ ಹೇಳಿದರು.

ತಾಲ್ಲೂಕಿನ ಸುಂಡಹಳ್ಳಿ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ಮತ್ತು ವೈದ್ಯಕೀಯ ವ್ಯಾಸಂಗದಲ್ಲಿ ತೊಡಗಿರುವವರು ಹೆಚ್ಚು ಶ್ರೀಮಂತರಾಗಿರುತ್ತಾರೆ. ಈ ಕಾರಣದಿಂದಲೇ ಮಾದಕ ವಸ್ತುಗಳ ಸಾಗಣೆಯಲ್ಲಿ ತೊಡಗಿರುವವರು ಇವರನ್ನು ಗುರಿಯಾಗಿಸಿಕೊಳ್ಳುವರು. ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಕುತೂಹಲಕ್ಕಾಗಿ ಸೇವಿಸುತ್ತಾ ಆನಂತರದಲ್ಲಿ ಅದಕ್ಕೆ ಹೆಚ್ಚು ದಾಸರಾಗುತ್ತಾರೆ ಎಂದು ಹೇಳಿದರು.

ಮಾದಕ ವಸ್ತುಗಳ ಮಾರಾಟ, ಅಕ್ರಮ ಸಾಗಣೆಯಲ್ಲಿ ತೊಡಗುವುದು ಕೊಲೆಗಿಂತಲೂ ದೊಡ್ಡ ಅಪರಾಧ. ಏಕೆಂದರೆ, ಈ ಪ್ರಕರಣಗಳಲ್ಲಿ ಸರ್ಕಾರದ ಗೆಜೆಟೆಡ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನೇ ಸಾಕ್ಷಿಗಳನ್ನಾಗಿ ಪರಿಗಣಿಸಲಾಗುವುದು. ಈ ಪ್ರಕರಣಗಳಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಿಕ್ಕಿಹಾಕಿಕೊಂಡವರ ಜೀವನವೇ ಹಾಳಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು.

ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಒಮ್ಮೆ ಅದಕ್ಕೆ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟ. ವಿದ್ಯಾರ್ಥಿಗಳು ಕಲಿಕೆಯತ್ತ ಗಮನಹರಿಸಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಮಾದಕ ವಸ್ತುಗಳ ಕಡೆ ತಿರುಗಿಯೂ ನೋಡಬಾರದು. ಅಂತಹ ಅಕ್ರಮ ಮಾರಾಟ, ಸಾಗಣೆ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಸೂಚಿಸಿದರು.

ತಾಂತ್ರಿಕ ಕಾಲೇಜಿನ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ಮಾತನಾಡಿ, ಮಾದಕ ವಸ್ತುಗಳ ಸೇವನೆ ಇತ್ತೀಚೆಗೆ ದೊಡ್ಡ ಪಿಡುಗಾಗಿದೆ. ಈ ಚಟಕ್ಕೆ ದಾಸರಾದವರ ಜೀವನ ಸಂಪೂರ್ಣವಾಗಿ ಹಾಳಾಗಿಹೋಗುತ್ತದೆ. ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ದೂರವಿರುವಂತೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಓದಿಗೆ ಹಣ ಹೊಂದಿಸಲು ತಂದೆ-ತಾಯಿ ಶ್ರಮಪಟ್ಟು ದುಡಿಯುತ್ತಿರುತ್ತಾರೆ. ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ. ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಗೇರಿ ಓದಿದ ಕಾಲೇಜಿಗೆ ಹಾಗೂ ಹೆತ್ತವರಿಗೆ ಒಳ್ಳೆಯ ಹೆಸರು ತರಬೇಕು ಎಂದರು.

ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎ.ಎಸ್.ಶ್ರೀಕಂಠಪ್ಪ, ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಪಿ.ರಾಜು, ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ವಿನೋದ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ