ಕನ್ನಡಪ್ರಭ ವಾರ್ತೆ ಚಿತ್ರದುರ್ಗ
2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಭರವಸೆ ನೀಡಲಾಗಿತ್ತು. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಯೋಜನೆಗ ಹಣ ವ್ಯಯ ಮಾಡದೆ ದಿವ್ಯ ನಿರ್ಲಕ್ಷ್ಯ ತಾಳಿದ ಪರಿಣಾಮ ಬಾಕಿ ಬಿಲ್ಲುಗಳ ಭಾರಕ್ಕೆ ಇಡೀ ಯೋಜನೆಯೇ ಕುಸಿದಿತ್ತು. ಕಾಮಗಾರಿ ಮುಂದುವರಿಸಲು ಸಾಧ್ಯವಾಗದೆ ಗುತ್ತಿಗೆದಾರರು ಪಲಾಯನ ಮಾಡಿದ್ದು 2025 ರ ಹೈಲೈಟ್ಸ್. ಜಿಲ್ಲೆಯ ರೈತಾಪಿ ಸಮುದಾಯ ಅನುದಾನಕ್ಕೆ ಹೋರಾಟ ನಡೆಸಿದರೂ ಕಿವಿ ಗೊಡಲಾಗಿಲ್ಲ.
ಈ ಶತಮಾನದಲ್ಲಿ ನಾಲ್ಕನೇ ಬಾರಿಗೆ ಹೊಸದುರ್ಗ ತಾಲೂಕಿನ ವಿವಿಸಾಗರ ಜಲಾಶಯ ತುಂಬಿ ಕೋಡಿ ಬಿದ್ದಿದೆ. 2025 ರಲ್ಲಿ ಎರಡು ಬಾರಿ ತುಂಬಿದ್ದು ವಿಶೇಷ. ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ಜಲಾಶಯ ಭರ್ತಿ ಮಾಡಲಾಗಿತ್ತು. ಬಾಗಿನ ಸಮರ್ಪಣೆ ಮಾಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಭದ್ರಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡದೆ ಕೇಂದ್ರದ ಅನುದಾನ ನೀಡಿಲ್ಲವೆಂದು ದೂಷಿಸಿ ಹೋಗಿದ್ದರು. ಈ ವರ್ಷ ಕನಿಷ್ಟ ಮುನ್ನೂರು ಕೋಟಿ ರೂಪಾಯಿ ಅನುದಾನವ ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಸಂಕಷ್ಟದ ನಡುವೆ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಆತಂಕ ನಿವಾರಣೆ ಆಗಿರುವುದು ಸಂತಸದ ಸಂಗತಿ.ವಿವಿ ಸಾಗರ ಜಲಾಶಯ ಭರ್ತಿಯಾದ ಹಿನ್ನಲೆ ಹಿನ್ನೀರು ವ್ಯಾಪಿಸಿ ಹೊಸದುರ್ಗ ತಾಲೂಕಿನ ರೈತಾಪಿ ಸಮುದಾಯ ಸಂಕಷ್ಟ ಸನ್ನಿವೇಶ ಎದುರಿಸುತ್ತು. ಜಮೀನು ಹಾಗೂ ತೋಟಗಳಿಗೆ ನೀರು ಸುತ್ತುವರಿದು ಫಸಲು ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ವಿವಿ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಅಳವಡಿಸುವ ಪ್ರಸ್ತಾಪ ಮತ್ತೆ ಕೇಳಿ ಬಂದಿತ್ತಾದರೂ ಈ ನಿಟ್ಟಿನ ಗಂಭೀರ ಪ್ರಯತ್ನಗಳು ನೇಪಥ್ಯಕ್ಕೆ ಸರಿದಿದ್ದು ಗಮನಾರ್ಹ.
ಚಿತ್ರದುರ್ಗ ಜಿಲ್ಲೆಯ ಎರಡು ಪ್ರಮುಖ ಮಠಗಳ ಪ್ರಾಂಗಣದಲ್ಲಿ ಒಂದಿಷ್ಟು ಸಂಚಲನಕ್ಕೆ 2025 ಸಾಕ್ಷಿಯಾಗಿತ್ತು. ತರಳಬಾಳು ಶ್ರೀ ಹಾಗೂ ಸಾಣಿಹಳ್ಳಿ ಶ್ರೀಗಳ ನಡುವೆ ಅಸಮಧಾನಗಳು ಮೂಡಿ ಪರಸ್ಪರ ದೂರವಾಗಿದ್ದರು. ಪ್ರತಿ ವರ್ಷ ಸಾಣೆಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ತರಳಬಾಳು ಶ್ರೀ ಪಿಟೀಲು ನುಡಿಸುತ್ತಿದ್ದರು. ವಿರಸದಿಂದಾಗಿ ಎರಡು ವರ್ಷ ತರಳಬಾಳು ಶ್ರೀ ಪಾಲ್ಗೊಂಡಿರಲಿಲ್ಲ. ಮುನಿಸು ತೊರೆದು ಈ ಬಾರಿ ಪಂಡಿತಾರಾಧ್ಯ ಶ್ರೀಗಳು ಖುದ್ದು ಸಿರಿಗೆರೆಗೆ ಆಗಮಿಸಿ ತರಳಬಾಳು ಶ್ರೀಗಳಿಗೆ ಆಹ್ವಾನ ನೀಡಲು ಮುಂದಾಗಿದ್ದರು. ಆದರೆ ತರಳಬಾಳು ಶ್ರೀ ಬೆಂಗಳೂರಿನಲ್ಲಿಯೇ ಉಳಿದಿದ್ದರಿಂದ ಉಭಯ ಶ್ರೀಗಳ ಸಮಾಗಮ ಆಗಲೇ ಇಲ್ಲ.
ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಬಳಿ ಅಳಿಯ ಅತ್ತೆ– ಮಾವನನ್ನು ಕೊಂದಿದ್ದು, ಸರ್ಕಾರಿ ಹಾಸ್ಟೆಲ್‌ನಲ್ಲಿದ್ದ ಪದವಿ ವಿದ್ಯಾರ್ಥಿನಿ ವರ್ಷಿತಾ ಕೊಲೆಯಾಗಿದ್ದು,ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕ ತಿಪ್ಪೇಸ್ವಾಮಿ ಎಂಬುವಾತ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕರಾಳ ಸನ್ನಿವೇಶಗಳಿಗೂ ಜಿಲ್ಲೆ ಸಾಕ್ಷಿಯಾಯಿತು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸ ಶ್ವೇತ ಭವನವ ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಖರೀದಿ ಮಾಡಿದ್ದು ನವೀಕರಣ ಮಾಡುವ ಕಾರ್ಯವ ಜಿಲ್ಲಾಡಳಿತ ಕೈಗೆತ್ತಿಕೊಂಡಿರುವುದು ಪ್ರಮುಖ ಸಂಗತಿಗಳಲ್ಲಿ ಒಂದು.