ಕಾನೂನಿನಿಂದ ತಾರತಮ್ಯ ನಿವಾರಣೆ ಆಗದು: ಸಂತೋಷ್‌ ಕೌಲಗಿ

KannadaprabhaNewsNetwork |  
Published : Oct 30, 2026, 01:15 AM IST
1 | Kannada Prabha

ಸಾರಾಂಶ

ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಕಾನೂನು ಇದ್ದರೂ ಅಸ್ಪೃಶ್ಯತೆ ಜೀವಂತವಾಗಿದೆ. ಕಾನೂನುಗಳ ಅನುಷ್ಠಾನದ ಜತೆಗೆ ಜನರ ಮನಸ್ಸಿನ ಪರಿವರ್ತನೆಯಾದಾಗ ಮಾತ್ರ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಸಾಧ್ಯ. ಈವರೆಗಿನ ಬೆಳವಣಿಗೆ ಗಮನಿಸಿದರೆ ಕೇವಲ ಕಾನೂನಿನಿಂದ ತಾರತಮ್ಯ ನಿವಾರಣೆ ಆಗುವುದಿಲ್ಲ ಎಂಬುದು ಸಾಭೀತಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇವಲ ಕಾನೂನಿನ ಕಾರಣಕ್ಕೆ ಸಾಮಾಜಿಕ ತಾರತಮ್ಯ ನಿವಾರಣೆ ಆಗದು, ಮಾನಸಿಕ ಬದಲಾವಣೆ ಅಗತ್ಯ ಎಂದು ಮೇಲುಕೋಟೆಯ ಸಾಮಾಜಿಕ ಕಾರ್ಯಕರ್ತ ಸಂತೋಷ್ ಕೌಲಗಿ ಹೇಳಿದರು.

ಮಾನಸ ಗಂಗೋತ್ರಿಯ ಡಾ.ಬಾಬು ಜಗಜೀವನರಾಮ್‌ ಸಂಶೋಧನಾ ಮತ್ತು ಅಧ್ಯಯನ ಕೇಂದ್ರವು, ಬಾಬು ಜಗಜೀವನರಾಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಸಹಯೋಗದಲ್ಲಿ ಗುರುವಾರ ಮಹಾತ್ಮ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಗಾಂಧಿ ಪ್ರಪಂಚ ಮತ್ತು ಬಾಬೂಜಿ ಚಿಂತನೆ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಕಾನೂನು ಇದ್ದರೂ ಅಸ್ಪೃಶ್ಯತೆ ಜೀವಂತವಾಗಿದೆ. ಕಾನೂನುಗಳ ಅನುಷ್ಠಾನದ ಜತೆಗೆ ಜನರ ಮನಸ್ಸಿನ ಪರಿವರ್ತನೆಯಾದಾಗ ಮಾತ್ರ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಸಾಧ್ಯ. ಈವರೆಗಿನ ಬೆಳವಣಿಗೆ ಗಮನಿಸಿದರೆ ಕೇವಲ ಕಾನೂನಿನಿಂದ ತಾರತಮ್ಯ ನಿವಾರಣೆ ಆಗುವುದಿಲ್ಲ ಎಂಬುದು ಸಾಭೀತಾಗಿದೆ ಎಂದರು.

ದಲಿತ ಮಹಿಳೆಯರು ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೂ, ಅವರು ತಯಾರಿಸಿದ ಆಹಾರವನ್ನು ಮೇಲ್ವರ್ಗದ ಮಕ್ಕಳು ಸೇವಿಸದಂತೆ ತಡೆದ ಘಟನೆಗಳು ನಡೆದಿದೆ. ಕಾನೂನುಗಳು ಬದಲಾವಣೆ ತಂದಿಲ್ಲ ಎಂದರ್ಥವಲ್ಲ. ದಲಿತ ಮಹಿಳೆಯರಿಗೆ ಸರ್ಕಾರಿ ಶಾಲೆಗಳ ಅಡುಗೆ ಕೆಲಸ ಸಿಗುವಲ್ಲಿ ಕಾನೂನುಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ ಅವರ ಕೊಡುಗೆಗಳು ಈ ಬದಲಾವಣೆಗೆ ನೆರವಾಗಿವೆ. ಅಡುಗೆ ಮಾಡುವ ಅವಕಾಶ ದೊರೆತಿರುವುದಷ್ಟೇ ಸಾಕಾಗುವುದಿಲ್ಲ. ಎಲ್ಲ ಸಮುದಾಯದ ಜನರು ಒಟ್ಟಿಗೆ ಕುಳಿತು ಊಟ ವಾಡುವಂತಹ ಸಾವಾಜಿಕ ವಾತಾವರಣ ನಿರ್ಮಾಣವಾಗಬೇಕು ಎಂದರು.

ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಜಾತಿ ತಾರತಮ್ಯ ಮತ್ತು ಶೋಷಣೆ ಅನುಭವಿಸಿದ ಸಮುದಾಯಗಳು ಹೋರಾಟಗಳನ್ನು ರೂಪಿಸಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿಯೂ ಪಾಲ್ಗೊಂಡಿದ್ದವು. ಅನ್ಯಾಯ ವಿರೋಧಿಸುವುದೇ ಗಾಂಧಿ ಚಿಂತನೆಯ ಮೂಲ ಆಶಯ. ಬಾಬು ಜಗಜೀವನರಾಮ ಅವರು ದಲಿತೋದ್ಧಾರದ ಹೋರಾಟವನ್ನು ಮುಂದುವರಿಸಿದ ಮಹಾನ್ ನಾಯಕರು. ಅವರ ಸತ್ಯನಿಷ್ಠೆ ಮತ್ತು ಧೈರ್ಯವನ್ನು ಗಾಂಧೀಜಿ ಮಚ್ಚಿದ್ದಾಗಿ ಹೇಳಿದರು.

ಗಾಂಧೀಜಿ ಪ್ರತಿಪಾದಿಸಿದ ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಪರಿಕಲ್ಪನೆಗಳು ಇಂದಿಗೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ರಾಜಕೀಯ ಸ್ವಾತಂತ್ರ್ಯ ದೊರೆತಿದ್ದರೂ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಮತ್ತು ಸಮಾನ ಅವಕಾಶಗಳು ತಲುಪಿಲ್ಲ. ಸವಾಜದಲ್ಲಿ ಮೌಲ್ಯಗಳ ಕುಸಿತವಾಗಿದ್ದು, ರಾಜಕೀಯ ವ್ಯವಸ್ಥೆಯಲ್ಲಿಯೂ ನೈತಿಕತೆ ಕ್ಷೀಣಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಶೇಖರ್, ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಎಂ.ಶ್ರೀನಿವಾಸ ಮೂರ್ತಿ, ಬಾಬು ಜಗಜೀವನರಾಮ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಜಂಟಿ ಕಾರ್ಯಕದರ್ಶಿ ಡಿ.ಪಿ.ಶಿವಪ್ರಸಾದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು