ಶುಂಠಿ, ಹಸಿಮೆಣಸಿನಕಾಯಿ ಬೆಳೆ ಪರಿಹಾರದಲ್ಲಿ ತಾರತಮ್ಯ

KannadaprabhaNewsNetwork |  
Published : Aug 14, 2026, 01:45 AM IST
ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು. | Kannada Prabha

ಸಾರಾಂಶ

ಕಳೆದ 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆಗಳಾದ ಶುಂಠಿ ಹಾಗೂ ಹಸಿಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮಾ ಪರಿಹಾರ ಜಮಾ ಮಾಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಫಲಾನುಭವಿ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವಂತೆ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬ್ಯಾಡಗಿ: ಕಳೆದ 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆಗಳಾದ ಶುಂಠಿ ಹಾಗೂ ಹಸಿಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮಾ ಪರಿಹಾರ ಜಮಾ ಮಾಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಫಲಾನುಭವಿ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವಂತೆ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಗಂಗಣ್ಣ ಎಲಿ ಕಳೆದ 2025-26ನೇ ಸಾಲಿನ ಮುಂಗಾರು ಅವಧಿಯಲ್ಲಿ ಶುಂಠಿ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾ ಪರಿಹಾರ ಜಮಾ ಮಾಡಲಾಗಿದೆ, ಆದರೆ ಅದೇ ಮಾದರಿಯಲ್ಲಿ ನಷ್ಟ ಅನುಭವಿಸಿದ ಕೆಲವು ಗ್ರಾಮ ಪಂಚಾಯತಿಗಳ ರೈತರಿಗೆ ಕನಿಷ್ಠ ಪ್ರಮಾಣದ ವಿಮಾ ಪರಿಹಾರ ಮಾತ್ರ ನೀಡಲಾಗಿದೆ. ಇಂತಹ ತಾರತಮ್ಯ ಅರ್ಥವಾಗುತ್ತಿಲ್ಲ, ಕೂಡಲೇ ಎಲ್ಲ ರೈತರಿಗೆ ಸಮಾನ ಪರಿಹಾರ ನೀಡುವಂತೆ ಆಗ್ರಹಿಸಿದರು.

ಅನ್ಯಾಯ ಮಾಡಬೇಡಿ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆವಿಮೆ ಪರಿಹಾರ ಲೆಕ್ಕಾಚಾರಕ್ಕೆ ಬಳಸಿರುವ ಹವಾಮಾನ ವರದಿ (ವೆದರ್ ರಿಪೋರ್ಟ್) ಹಾಗೂ ಬೆಳೆ ನಷ್ಟದ ಪ್ರಮಾಣವನ್ನು ಪರಿಶೀಲಿಸಿ, ಎಲ್ಲ ರೈತರಿಗೆ ಸಮಾನ ಹಾಗೂ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು. ಪರಿಹಾರ ಲೆಕ್ಕಾಚಾರದಲ್ಲಿ ಯಾವುದೇ ರೀತಿಯ ತಾರತಮ್ಯವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಡ್ಡಿ ಸಮೇತ ಕೊಡಿ: ಮೌನೇಶ ಕಮ್ಮಾರ ಮತಾನಾಡಿ, ಬೆಳೆವಿಮೆ ಪರಿಹಾರಕ್ಕೆ ಸಂಬಂಧಿಸಿದಂತೆ ನೋಂದಣಿ ಹಾಗೂ ಪರಿಹಾರ ಪಾವತಿಗೆ ನಿಗದಿತ ದಿನಾಂಕವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು. ಮಾರ್ಗಸೂಚಿಯಂತೆ ಟರ್ಮಸೀಟ್‌ ಅವಧಿ ಮುಗಿದ ನಂತರ 45 ದಿನಗಳೊಳಗೆ ಲೆಕ್ಕಾಚಾರದ ಪರಿಹಾರ ಹಣವನ್ನು ರೈತರಿಗೆ ನೀಡಬೇಕಾಗಿದ್ದು, ವಿಳಂಬವಾಗಿರುವ ಸಂದರ್ಭಗಳಲ್ಲಿ ಬಡ್ಡಿ ಹಣ ಸೇರಿಸಿ ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು ಎಂದು ಒತ್ತಾಯಿಸಿದರಲ್ಲದೇ ಆ.17ರೊಳಗಾಗಿ ಈಡೇರಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ರುದ್ರಗೌಡ ಕಾಡನಗೌಡ್ರ, ಜಾನ ಪುನೀತ್, ಚಿಕ್ಕಪ್ಪ ಛತ್ರದ, ಶಿವರುದ್ರಪ್ಪ ಮೂಡೇರ, ಪ್ರಕಾಶ ಸಿದ್ದಪ್ಪನವರ, ಬಸವರಾಜ ಕುಮ್ಮೂರ, ಅಶೋಕ ಶಿಡೇನೂರ, ಸುಭಾಸ ಬನ್ನಿಹಟ್ಟಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ