ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಐದು ಪಂಚಾಯ್ತಿಗಳನ್ನು ಶ್ರೇಣೀಕರಿಸಿ ಒಂದು ಪಂಚಾಯ್ತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲು ಅಂಕಗಳನ್ನು ನೀಡುವಾಗ ಅನರ್ಹ ಪಂಚಾಯ್ತಿಗಳಿಗೆ ಹೆಚ್ಚು ಅಂಕ ನೀಡಲಾಗುತ್ತಿದೆ. ಉತ್ತಮ ಕಾರ್ಯದಕ್ಷತೆ ಹೊಂದಿರುವ ಪಂಚಾಯ್ತಿಗಳಿಗೆ ಕಡಿಮೆ ಅಂಕ ನೀಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಒತ್ತಡ, ಪ್ರಭಾವವಿದೆ ಎಂದು ಆಪಾದನೆ ವ್ಯಕ್ತವಾಗಿದೆ.
ಪಂಚಾಯ್ತಿ ವ್ಯಾಪ್ತಿಯ ಜನರ ಜೀವನಮಟ್ಟ, ಹಣಕಾಸಿನ ವಿಷಯಗಳು, ಮೂಲಸೌಕರ್ಯಗಳು, ಉತ್ತಮ ಆಡಳಿತ, ಗ್ರಾಪಂ ಸೇವೆಗಳು, ಗ್ರಾಪಂ ಅಭಿವೃದ್ಧಿ ಚಟುವಟಿಕೆಗಳನ್ನು ಗುರುತಿಸಿ ಪ್ರಶ್ನೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಅಂಕ ನೀಡಲಾಗುತ್ತದೆ. ಈ ಹಂತದಲ್ಲಿ ತಾಲೂಕು ಪಂಚಾಯ್ತಿ ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿ ಶ್ರಮವಹಿಸಿ ಅಭಿವೃದ್ಧಿಪಡಿಸಿರುವ ಪಂಚಾಯ್ತಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಪಂಚಾಯ್ತಿ ಮಟ್ಟದ ಜನಪ್ರತಿನಿಧಿಗಳು ನೇರವಾಗಿಯೇ ದೂಷಣೆ ಮಾಡಿದ್ದಾರೆ.ಸಕಲ ಸೌಲಭ್ಯಗಳನ್ನು ಹೊಂದಿರುವ ಪಂಚಾಯ್ತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರದಿಂದ ವಂಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಂಚಾಯ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಪಾಡದೆ ರಾಜಕೀಯಕ್ಕೆ ಮಣೆ ಹಾಕಲಾಗುತ್ತಿದೆ. ಸ್ವತಃ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೋದ ಬಳಿಕ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದು ಉತ್ತಮ ಪಂಚಾಯ್ತಿಗಳಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರಿಗೆ ದೂರು ನೀಡಿದ್ದಾರೆ.
ನಮ್ಮದೊಂದು ಸಣ್ಣ ಪಂಚಾಯ್ತಿ ಎಂದು ಅನ್ಯಾಯವೆಸಗುತ್ತಿದ್ದಾರೆ. ಸಮಗ್ರವಾಗಿ ಅಭಿವೃದ್ಧಿ ಹೊಂದಿರುವ ಪಂಚಾಯ್ತಿಗಳನ್ನು ಪುರಸ್ಕಾರದಿಂದ ದೂರವಿಟ್ಟು ಏನೂ ಕೆಲಸ ಮಾಡದ ಪಂಚಾಯ್ತಿಗಳಿಗೆ ಹೆಚ್ಚಿನ ಅಂಕ ನೀಡಿರುವುದು. ತಮಗಿಷ್ಟ ಬಂದ ಹಾಗೂ ರಾಜಕೀಯ ಪ್ರಭಾವ ಬೀರಿದ ಪಂಚಾಯ್ತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
- ಸಿದ್ದಾಚಾರಿ, ಉಪಾಧ್ಯಕ್ಷರು, ಗೋಪಾಲಪುರ ಗ್ರಾಪಂ