ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಂದಿನಿ ಹಾಲಿನ ದರ ಏರಿಕೆ ಮಾಡುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿಯೇ ಘೋಷಣೆ ಮಾಡಿದ್ದಾರೆ. ಅಲ್ಲದೆ ದರ ಹೆಚ್ಚಳದ ಲಾಭ ರೈತರಿಗೆ ದೊರೆಯುವಂತೆ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ, ದರ ಹೆಚ್ಚಳದ ಪ್ರಯೋಜನ ನಮಗೆ ದೊರೆಯುವುದೇ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರು ಸಂಶಯ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳಾಗುತ್ತಿವೆ. ಸಚಿವರು, ಶಾಸಕರು ಬೆಲೆ ಏರಿಕೆ ಕುರಿತು ಸಮರ್ಥನೆ ಮಾಡಿಕೊಂಡರೆ, ಸಾಮಾನ್ಯ ಜನರು ಮತ್ತು ಹೈನುಗಾರ ರೈತರು ಹಾಗೂ ವಿರೋಧ ಪಕ್ಷದವರು ಸರ್ಕಾರವು ರೈತರ ಹೆಸರು ಹೇಳಿಕೊಂಡು ಬೆಲೆ ಏರಿಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಸರ್ಕಾರದ ರೈತ ವಿರೋಧಿ ನೀತಿಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿವೆ. ಅವಿಭಜಿತ ಜಿಲ್ಲೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಜನ ಹಾಲು ಉತ್ಪಾದಕರಿದ್ದಾರೆ. ಜೊತೆಗೆ ಕಳೆದ ವರ್ಷ ರಾಜ್ಯ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ, ರಾಜ್ಯದಲ್ಲಿ ರೈತರು ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ರೈತರು ಮತ್ತು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.2 ಬಾರಿ ಹಾಲು ಖರೀದಿ ದರ ಇಳಿಕೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿದೆ. ಹಾಲಿನ ಖರೀದಿ ದರ ಇಳಿಕೆ ಮಾಡುವ ಮೊದಲು ರೈತರಿಗೆ ಲೀಟರ್ ಹಾಲಿಗೆ 34 ರುಪಾಯಿ ಸಿಗುತ್ತಿತ್ತು. ಆದರೆ ಹಾಲು ಖರೀದಿ ದರ ಎರಡು ಬಾರಿ ಇಳಿಕೆ ಮಾಡಿದ ನಂತರ ಈಗ ಲೀಟರ್ ಹಾಲಿಗೆ ರೈತರಿಗೆ ಸಿಗುತ್ತಿರುವುದು ಕೇವಲ 30.15 ರುಪಾಯಿ ಮಾತ್ರ. ಆದರೆ, ಹಾಲು ದರ ಏರಿಕೆ ಮಾಡಿ ಸರ್ಕಾರ ಗ್ರಾಹಕರಿಗೆ 50 ರುಪಾಯಿಗೆ ಮಾರಾಟ ಮಾಡುತ್ತಿದೆ.ದರ ಏರಿಸಿದರೆ ಸರ್ಕಾರಕ್ಕೆ ಲಾಭ
ಈಗ ಹಾಲಿನ ದರ 5 ರೂಪಾಯಿ ಏರಿಕೆ ಮಾಡಿ ಏರಿಕೆ ಮಾಡಿದ ದರವನ್ನು ನೇರವಾಗಿ ರೈತರಿಗೆ ಕೊಟ್ಟರೂ ರೈತರಿಗೆ ಲೀಟರ್ ಹಾಲಿಗೆ ಸಿಗುವುದು ಕೇವಲ 35 ರೂಪಾಯಿ. ಆದರೆ ಗ್ರಾಹಕರಿಗೆ ಮಾರಾಟ ಮಾಡುವುದು 55 ರು.ಗಳಿಗೆ, ಹಾಗಾಗಿ ಸರ್ಕಾರ ಒಂದು ಲೀಟರ್ ಹಾಲಿನ ಮೇಲೆ 20 ರು.ಗಳ ಲಾಭ ಪಡೆಯುತ್ತಿದೆ ಎಂಬುದು ಹಾಲು ಉತ್ಪಾದಕರ ಮಾತು.ಪ್ರತಿಬಾರಿ ಹಾಲಿನ ಏರಿಕೆ ಮಾಡುತ್ತಿದ್ದಂತೆ ಪಶು ಆಹಾರ ಹಾಗೂ ಪೀಡ್ಸ್ ಸೇರಿ ಎಲ್ಲಾ ಬೆಲೆಗಳು ಏರಿಕೆಯಾಗುತ್ತವೆ. ಅವರು ಮಾತ್ರ ಬೆಲೆ ಕಡಿಮೆ ಮಾಡುವುದೇ ಇಲ್ಲ. ಇದರಿಂದ ಹಾಲಿನ ದರ ಏರಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಪಶುಆಹಾರದ ಬೆಲೆ ಇಳಿಕೆ ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂಬ ಮಾತುಗಳು ಸಹಾ ರೈತರಿಂದ ಕೇಳಿ ಬರುತ್ತಿದೆ. ಹಾಲು ಉತ್ಪಾದಕರಿಗೆ ಲಾಭವಿಲ್ಲಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ದರ ಮಾತ್ರ ಏರಿಕೆಯಾಗುತ್ತಿದ್ದು, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ರೈತರಿಗೆ ಇದರ ಲಾಭ ಸಿಗುತ್ತಿಲ್ಲ. ಈ ಬಾರಿಯಾದರೂ ಸರ್ಕಾರ ಏರಿಕೆ ಮಾಡುವ ಹಾಲಿನ ದರದಲ್ಲಿ ಹಾಲು ಉತ್ಪಾದಕ ರೈತರಿಗೆ ಒಂದಷ್ಟು ಲಾಭ ಸಿಗಬೇಕಿದೆ. ಇಲ್ಲದಿದ್ದರೆ ರೈತರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.