ಸಂಸ್ಕೃತ ಇತರ ದೇಶಗಳಲ್ಲಿ ಪ್ರಸಿದ್ಧ: ಪ್ರಮೋದ್ ಕುಮಾರ್ ಬಿ

KannadaprabhaNewsNetwork |  
Published : Sep 23, 2024, 01:19 AM IST
ಸಂಸ್ಕೃತ | Kannada Prabha

ಸಾರಾಂಶ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಂಸ್ಕೃತ ಭಾಷಾ ಸಾಹಿತ್ಯವು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಪ್ರಸಿದ್ಧವಾದವು. ಭಾಷೆಯೊಂದಿಗೆ ಸಾಹಿತ್ಯ ಬೆಳೆಯಬೇಕಾದರೆ ಆದಷ್ಟು ಸಂಸ್ಕೃತ ವಾತಾವರಣ ನಿರ್ಮಾಣ ಆಗಬೇಕು. ಸಂಸ್ಕೃತದ ಆದರ್ಶ ಮೌಲ್ಯಗಳನ್ನು ಎಲ್ಲ ವಿದ್ಯಾರ್ಥಿಗಳಲ್ಲಿ ಮೊದಲು ಒಡಮೂಡಿಸುವಂತಾಗಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ತಿಳಿಸಿದರು. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘ, ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರಿಗೆ ನಡೆದ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವಿಧ ಪ್ರಶಿಕ್ಷಣ ಗೋಷ್ಠಿಗಳು ನಡೆದವು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಕಲಾ ನಿಕಾಯದ ಡೀನ್ ಆಗಿರುವ ಡಾ. ಎನ್. ಶ್ರೀಧರ ಭಟ್ ಅವರು ಭಾಣ ಭಟ್ಟನ ಕಾದಂಬರಿ ವಿಷಯದ ಬಗ್ಗೆ , ಶೃಂಗೇರಿಯ ಸರ್ಕಾರಿ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಡಾ. ಮಹೇಶ ಕಾಕತ್ಕರ್ ಅವರು ಭಾಸನ ಬಾಲಚರಿತಮ್ ನಾಟಕದ ಬಗ್ಗೆ ಹಾಗೂ ಧರ್ಬೇತ್ತಡ್ಕದ ಶ್ರೀ ಶಂಕರ ವೇದವಿದ್ಯಾ ಗುರುಕುಲದ ಪ್ರಾಚಾರ್ಯ ವೇದಮೂರ್ತಿ ಆಂಶುಮಾನ್ ಅಭ್ಯಂಕರ ಅವರು ಭೋಜನ ಚಂಪೂ ರಾಮಾಯಣದ ಬಗ್ಗೆ ವಿಷಯಗಳನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತ ಭಾಷಾ ಪಠ್ಯ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ಚರ್ಚೆ ನಡೆಯಿತು.

ಕಾರ್ಯಕ್ರಮ ಸಂಯೋಜಕ ಹಾಗೂ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಭಟ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಮಧುಕೇಶ್ವರ ಶಾಸ್ತ್ರಿ ವಂದಿಸಿದರು.

ದ.ಕ. ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ