ಮಕ್ಕಳ ಸಮಸ್ಯೆಗಳನ್ನು ಶಾಸನ ಸಭೆಗಳಲ್ಲಿ ಚರ್ಚಿಸಿ: ಹಿರಿಯ ಪತ್ರಕರ್ತ ಜಿ.ಮುಮ್ತಾಜ್ ಆಲೀಮ್

KannadaprabhaNewsNetwork | Published : May 15, 2024 1:33 AM

ಸಾರಾಂಶ

ಬಾಲ ಕಾರ್ಮಿಕ ಪದ್ಧತಿ , ಬೀದಿ ಮಕ್ಕಳ ಮೇಲಿನ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ, ಪೋಷಕರು ಸೇರಿ ಸಮಾಜ ವಿರೋಧಿ ಶಕ್ತಿಗಳು ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುವುದು, ಮಕ್ಕಳ ಅಪಹರಣ, ಮಕ್ಕಳ ಆರೋಗ್ಯ ಸಮಸ್ಯೆಗಳು ಸೇರಿ ಲಕ್ಷಾಂತರ ಮಕ್ಕಳು ರಾಷ್ಟ್ರದಲ್ಲಿ ಬಳಲುತ್ತಿದ್ದಾರೆ. ಆದರೆ, ಶಾಸನಸಭೆಗಳಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಸಂಸದರಾಗಲಿ, ಶಾಸಕರಾಗಲಿ ಚರ್ಚೆಯನ್ನೇ ನಡೆಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ಸಮಸ್ಯೆಗಳ ಕುರಿತು ಶಾಸನ ಸಭೆಗಳಲ್ಲಿ ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಜಿ.ಮುಮ್ತಾಜ್ ಅಲೀಮ್ ಹೇಳಿದರು.

ತಾಲೂಕಿನ ಹರವು ಗ್ರಾಮದ ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣದಲ್ಲಿ ಗ್ರಾಮ ಸಂಸ್ಕೃತಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ‘16ನೇ ವರ್ಷದ ಕುಣಿಯೋಣು ಬಾರಾ ಬೇಸಿಗೆ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಲ ಕಾರ್ಮಿಕ ಪದ್ಧತಿ , ಬೀದಿ ಮಕ್ಕಳ ಮೇಲಿನ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ, ಪೋಷಕರು ಸೇರಿ ಸಮಾಜ ವಿರೋಧಿ ಶಕ್ತಿಗಳು ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುವುದು, ಮಕ್ಕಳ ಅಪಹರಣ, ಮಕ್ಕಳ ಆರೋಗ್ಯ ಸಮಸ್ಯೆಗಳು ಸೇರಿ ಲಕ್ಷಾಂತರ ಮಕ್ಕಳು ರಾಷ್ಟ್ರದಲ್ಲಿ ಬಳಲುತ್ತಿದ್ದಾರೆ. ಆದರೆ, ಶಾಸನಸಭೆಗಳಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಸಂಸದರಾಗಲಿ, ಶಾಸಕರಾಗಲಿ ಚರ್ಚೆಯನ್ನೇ ನಡೆಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಡತನ, ಅಪೌಷ್ಟಿಕತೆ, ಅಸುಚಿತ್ವ ಕೊರತೆಗಳಿಂದಲೂ ಮಕ್ಕಳ ಸಾವು- ನೋವುಗಳು ನಡೆಯುತ್ತಿವೆ. ಮಕ್ಕಳು ಸೇರಿ ದೇಶದ ಪ್ರತಿ ನಾಗರಿಕನಿಗೂ ಸಂವಿಧಾನ ಕಾನೂನಿನ ರಕ್ಷಣೆ ಖಾತರಿಪಡಿಸುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.

ರಂಗಕರ್ಮಿ ಗಿರೀಶ್ ಮಾಚಳ್ಳಿ ಮಾತನಾಡಿ, ಬಾಲ್ಯದಲ್ಲೇ ತಮ್ಮ ಹಳ್ಳಿಯ ಒಡನಾಟ, ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡು ರಂಗಭೂಮಿಗೆ ಬಂದವರೇ ನಿಜ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಇಂತಹ ಶಿಬಿರಗಳೇ ಮಕ್ಕಳಿಗೆ ಅಡಿಪಾಯ. ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಶಿಬಿರ ಆಯೋಜಿಸಿ ಮಕ್ಕಳ ಜ್ಞಾನ ಶಾಖೆಯನ್ನು ಬೆಳೆಸುತ್ತಿರುವ ಲೇಖಕ ಹರವು ದೇವೇಗೌಡರ ನಿರಂತರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಳುಬಿದ್ದ ಶಿಥಿಲಾವಸ್ಥೆಗೆ ತಲುಪಿ, ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಈ ರಾಮದೇವರ ದೇಗುಲವನ್ನು 30 ವರ್ಷಗಳಿಂದ ಜೀರ್ಣೋದ್ಧಾರ ಮಾಡಿಸಿ ಈ ಪರಿಸರವನ್ನು ರಂಗ ಚಟುವಟಿಕೆಗೆ ಬಳಸುತ್ತ ದೇಗುಲವನ್ನು ಸಾಂಸ್ಕೃತಿಕ ಕೇಂದ್ರವಾಗಿಸಿರುವುದು ಈ ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ನೃತ್ಯಗಳು, ಕಂಸಾಳೆ ಹಾಗೂ ನೀಲಿಮರ ಎಂಬ ಮಕ್ಕಳ ನಾಟಕವನ್ನು ಪ್ರದರ್ಶಿಸುವ ಮೂಲಕ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಲಾಸಕ್ತರನ್ನು ಮಕ್ಕಳ ರಂಜಿಸಿದರು. ಶಿಬಿರದ ವ್ಯವಸ್ಥಾಪಕಾರದ ಹರವು ದೇವೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

Share this article