ನಗರಸಭೆ ಅಧ್ಯಕ್ಷರ ಕಾಲಾವಧಿ ಚರ್ಚೆ: ಸದಸ್ಯರ ನಡುವೆ ವಾಗ್ವಾದ

KannadaprabhaNewsNetwork |  
Published : Apr 04, 2026, 01:45 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುನಗರಸಭೆ ಅಧ್ಯಕ್ಷರ ಕಾಲಾವದಿ ಆಯ್ಕೆ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ತಾಕ್ತತಿನ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರಸಭೆ ಅಧ್ಯಕ್ಷರ ಕಾಲಾವದಿ ಆಯ್ಕೆ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ತಾಕ್ತತಿನ ಸವಾಲು ಹಾಕಿದರು.

ಸಭೆ ಆರಂಭದಲ್ಲಿ ಆರು ಅಥವಾ ಎಂಟು ತಿಂಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಅಧ್ಯಕ್ಷರಾದವರಿಗೆ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ. ಕನಿಷ್ಠ ಅಧ್ಯಕ್ಷರಿಗೆ 2.5 ವರ್ಷ ಕಾಲಾವಧಿ ಇರಬೇಕು ಎಂದು ಬಿಜೆಪಿ ಸದಸ್ಯಟಿ.ರಾಜಶೇಖರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸದಸ್ಯರು, ಹಾಗಿದ್ದರೆ, ಹಾಲಿ ಅಧ್ಯಕ್ಷೆ ಶೀಲಾ ದಿನೇಶ್‌ ಅವರನ್ನು ಮುಂದುವರಿಸಿ ನೋಡೋಣ ಎಂದು ಸವಾಲು ಹಾಕಿದರು. ಈ ವೇಳೆ ಮಾತಿಗೆ ಮಾತು ಬೆಳೆದು, ಬಿಜೆಪಿ ಸದಸ್ಯ ರಾಜಶೇಖರ್‌, ಅಧ್ಯಕ್ಷ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಯನ್ನು ನಿಲ್ಲಿಸುವ ತಾಕತ್ತಿಲ್ಲ ಎಂದರು. ಆಗ ಮುನೀರ್‌ ಸೇರಿದಂತೆ ಕಾಂಗ್ರೆಸ್‌ ಸದಸ್ಯರು, ಪಕ್ಷದ ತಾಕತ್ತನ್ನು ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ತೋರಿಸಿದ್ದೇವೆ ಎಂದರು.

ಪದೇ ಪದೇ ನಗರಸಭೆ ಅಧ್ಯಕ್ಷರನ್ನು ಬದಲಾವಣೆ ಮಾಡಿ ನಗರವನ್ನು ಹಾಳು ಮಾಡುತ್ತಿದ್ದೀರಾ, ನೀವೇ ಅಧ್ಯಕ್ಷರನ್ನು ನೇಮಕ ಮಾಡುತ್ತೀರಾ, ನೀವೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸುತ್ತೀರಾ, ಸಾರ್ವಜನಿಕರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಆಗ ರಾಜಶೇಖರ್‌ ಮುಂದಿನ ಅಧ್ಯಕ್ಷರ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿ ಆಗ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಸವಾಲು ಹಾಕಿದ ಪ್ರಸಂಗ ನಡೆಯಿತು. ಮಧ್ಯಪ್ರವೇಶಿಸಿದ ಅಧ್ಯಕ್ಷೆ ಶೀಲಾ ದಿನೇಶ್‌ ಹಾಗೂ ಪೌರಾಯುಕ್ತ ಬಸವರಾಜ್‌ ಚರ್ಚೆ ಸಲ್ಲಿಸಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು.ಸದಸ್ಯರಿಗೆ ಗೌರವ ನೀಡದ ಅಧಿಕಾರಿಗಳು: ಆರೋಪ

ನಗರಸಭೆಯ ಕೆಲ ಅಧಿಕಾರಿಗಳು, ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಕರೆ ಮಾಡಿದರೆ ಅಗೌರವದಿಂದ ಮಾತನಾಡುತ್ತಾರೆ. ಅಲ್ಲದೆ ನಗರಸಭೆ ಸದಸ್ಯರ ಕೆಲಸಗಳನ್ನೇ ಮಾಡಿಕೊಡುವುದಿಲ್ಲ. ಸದಸ್ಯರ ಸ್ಥಿತಿಯ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂದು ಸದಸ್ಯರಾದ ಲಕ್ಷ್ಮಣ್, ಪರಮೇಶ್ವರ್, ಮುನೀರ್, ಟಿ.ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಪ್ರತಿಕ್ರಿಯಿಸಿ ಸದಸ್ಯರ ಕರೆ ಸ್ವೀಕರಿಸುವುದಿಲ್ಲ ಹಾಗೂ ಅವರಿಗೆ ಗೌರವ ನೀಡು ವುದಿಲ್ಲ ಎಂದರೆ ನೀವು ಏಕೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮುಂದೆ ಈ ರೀತಿ ಘಟನೆಗಳು ಮರುಕಳಿಸಿದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರಿ ನೌಕರರು ಸರ್ಕಾರಿ ನೌಕರರಂತೆ ನಡೆದುಕೊಳ್ಳಬೇಕು. ತಮಗೆ ಇಷ್ಟ ಬಂದಂತೆ ವರ್ತಿಸುವವರು ವರ್ಗಾವಣೆ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಸಿದ್ದರಾಗಬೇಕು ಎಂದರು.

-- ಬಾಕ್ಸ್.....

ರಸ್ತೆ ಗುಂಡಿ ಮುಚ್ಚುವ ದಂಧೆ

ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ಅಧಿಕಾರಿಗಳು ಇದನ್ನೆ ದಂಧೆ ಮಾಡಿಕೊಂಡಿದ್ದಾರೆ. ಎಲ್ಲಿಯೂ ಸರಿಯಾಗಿ ರಸ್ತೆ ಗುಂಡಿ ಮುಚ್ಚುತ್ತಿಲ್ಲ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ದಂಧೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಕಳೆದ 7ವರ್ಷಗಳಿಂದ ಟೆಂಡರ್ ಕರೆಯುತ್ತಿರಲಿಲ್ಲ. ಈ ವರ್ಷ ಟೆಂಡರ್ ಕರೆದ ಕ್ಷಣ ಮತ್ತೆ ದಂಧೆ ಶುರುವಾಗಿದೆ ಎಂದು ಸದಸ್ಯ ಟಿ. ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿ ಆಕ್ಟಿವ್ ಆಗಿರುವ ಎಂಜಿನಿಯರ್ ಗಳು ಬೇಕು. ಆದರೆ ನಮ್ಮಲ್ಲಿರುವ ಇಬ್ಬರು ಎಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚದಿದ್ದಲ್ಲಿ ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವುದಿಲ್ಲ ಎಂದ ಪೌರಾಯುಕ್ತರು ಕಾಮಗಾರಿ ಮುಗಿದ ತಕ್ಷಣ ಸದಸ್ಯರೊಂದಿಗೆ ತಾವೇ ಖುದ್ದು ಪರಿಶೀಲಿಸಿ ಬಿಲ್ ಪಾವತಿಸುವ ಭರವಸೆ ನೀಡಿದರು.

-- ಬಾಕ್ಸ್....

ಲಂಚ ಹಾವಳಿಗೆ ಆಕ್ರೋಶ

ನಕ್ಷಾ ಸರ್ವೆಗೆ ನಗರಸಭೆ ಅಧಿಕಾರಿಗಳು ಮನೆಗಳಿಗೆ ಹೋಗುವಾಗ ಮಧ್ಯವರ್ತಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಇ ಖಾತೆ ಮಾಡಲು ₹10 ಸಾವಿರ ನೀಡುವಂತೆ ಜನರ ಬಳಿ ಬೇಡಿಕೆ ಇಡುತ್ತಿದ್ದಾರೆ ಎಂದು ಸದಸ್ಯ ವರಸಿದ್ಧಿ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಧ್ವನಿಗೂಡಿಸಿದ ಟಿ.ರಾಜಶೇಖರ್, ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದೆ ಆದಲ್ಲಿ ಈ ಬಗ್ಗೆ ಯಾರಾದರೂ ನಗರಸಭೆಗೆ ದೂರು ನೀಡಿದರೆ ಅಂತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ನಗರಸಭೆ ಆಯುಕ್ತರು ಮೊದಲು ಗಮನ ನೀಡಬೇಕು ಎಂದರು.

ಯಾವುದೇ ಅಧಿಕಾರಿಯಾಗಲಿ, ಗುತ್ತಿಗೆದಾರರ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಂತವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದರು.

---ಬಾಕ್ಸ್‌---

ಪ್ರತಿ ತಿಂಗಳು ಸಭೆ ಮಾಡಿ

ಸಾಮಾನ್ಯ ಸಭೆಯನ್ನು ನಿಯಮ ಪ್ರಕಾರ ಪ್ರತಿತಿಂಗಳು ಮಾಡಬೇಕು. ಆಗ ಸದಸ್ಯರು ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. 3-4 ತಿಂಗಳ ಸಭೆ ಮಾಡುವುದರಿಂದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ಟಿ.ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹವಾಮಾನ ವೈಪರಿತ್ಯಕ್ಕೆ ಮಾವು ಫಸಲು ಶೇ.50 ಕುಸಿತ!
ಅಲ್ದೂರಿನಲ್ಲಿ ಶೀಘ್ರ ಹೈಟೆಕ್‌ ಸರ್ಕಾರಿ ಆಸ್ಪತ್ರೆ