ಶಿರಸಿ: ಪೋಷಕಾಂಶಯುಕ್ತ ಆಹಾರ ಸೇವನೆಗೆ ಹೆಚ್ಚಿನ ಗಮನ ಕೊಡಿ ಎಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ ಹೇಳಿದರು.
ಸ್ಕೊಡ್‌ವೆಸ್ ಸಂಸ್ಥೆ ಶಿರಸಿ, ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್, ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಶಿರಸಿ ಅರಣ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ವಿದ್ಯಾರ್ಥಿ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾದ ರಕ್ತ ಹೀನತೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜೀವನ ಶೈಲಿಗೆ ಆಕರ್ಷಿತರಾಗುತ್ತಿರುವ ಯುವ ಸಮುದಾಯ, ಪೋಷಕಾಂಶಯುಕ್ತ ಆಹಾರ ಸೇವನೆಗೆ ಒತ್ತು ಕೊಡದೇ ಜಂಕ್ ಫುಡ್‌ನಂತಹ ಆಹಾರ ಸೇವನೆಯಿಂದ ರಕ್ತ ಹೀನತೆಗೆ ಒಳಗಾಗಿ ಹಲವಾರು ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ಪೌಷ್ಟಿಕ ಹಾಗೂ ಸಾತ್ವಿಕ ಆಹಾರ ಸೇವನೆಯಿಂದ ತಡೆಗಟ್ಟಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್.ರವಿ ಮಾತನಾಡಿ, ಭಾರತದಾದ್ಯಂತ ರಕ್ತ ಹೀನತೆಗೆ ಒಳಪಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಯಸ್ಸಿಗೆ ತಕ್ಕಂತೆ ದೇಹದ ಆರೋಗ್ಯ,ತೂಕ ಹಾಗೂ ಕ್ರೀಯಾಶೀಲತೆಯ ನಿರ್ವಹಣೆಯಲ್ಲಿ ಸಾಮಾನ್ಯ ಜನ ವಿಫಲರಾಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಅನೀಮಿಯಾ ಮುಕ್ತ ಭಾರತ ಎಂಬ ಯೋಜನೆಯನ್ನೂ ಸಹ ಜಾರಿಗೆ ತಂದಿದ್ದು, ದೇಶದಾದ್ಯಂತ ರಕ್ತ ಹೀನತೆ ತಪಾಸಣೆ ಹಾಗೂ ಜಾಗೃತಿ ನಡೆಸಲಾಗುತ್ತಿದೆ ಎಂದರು.ಸ್ಕೊಡ್‌ವೆಸ್ ಸಂಸ್ಥೆಯೂ ಸಹ ದೇಸಾಯಿ ಫೌಂಡೇಶನ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅನೀಮಿಯಾ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಮುಂದಿನ 01 ತಿಂಗಳಿನಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 50000ಕ್ಕೂ ಹೆಚ್ಚಿನ ಜನರಿಗೆ ತಪಾಸಣೆ ನಡೆಸಿ ಅನೀಮಿಯಾ ನಿರ್ಮೂಲನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ಕಾರ್ಯಕ್ರಮದ ನಂತರ 200 ಜನರ ತಪಾಸಣೆ ಮಾಡಿ ರಕ್ತ ಹೀನತೆ ಇರುವ ವಿದ್ಯಾರ್ಥಿಗಳಿಗೆ ಅಗತ್ಯ ಔಷಧ ವಿತರಿಸಿ ಅರಿವು ಮೂಡಿಸಲಾಯಿತು. ವೇದಿಕೆಯಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಯಶಸ್ವಿನಿ ಶರ್ಮಾ, ವಿನಾಯಕ ಉಪಾಧ್ಯಾಯ ಹಾಗೂ ಫಿಸಿಯೋಥೆರಪಿಸ್ಟ್ ಸುಧೀ ಸಿ.ಎಸ್. ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜೆ.ಸ್ವಾಗತಿಸಿದರು. ಕಾರ್ಯಕ್ರಮವನ್ನು ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಂದೇಶ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.