ಕನ್ನಡಪ್ರಭ ವಾರ್ತೆ ಬೇಲೂರು
ವಿದ್ಯಾರ್ಥಿನಿಲಯದಲ್ಲಿ ವಾರ್ಡನ್ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರಕದಿರುವ ಬಗ್ಗೆ ತಹಸೀಲ್ದಾರ್ ಎಂ. ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹಳೇಬೀಡು ಪಟ್ಟಣದಲ್ಲಿರುವ ಬಾಲಕರ ವಿದ್ಯಾರ್ಥಿ ವಸತಿ ನಿಲಯಕ್ಕೆ ತಹಸೀಲ್ದಾರ್ ಎಂ. ಮಮತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಹಾಸ್ಟೆಲ್ನಲ್ಲಿನ ಸ್ವಚ್ಛತೆ, ನಿಲಯ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳು ಸೇರಿದಂತೆ ಇನ್ನಿತರ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ಮಾಡಿ, ಸೂಕ್ತ ನಿರ್ವಹಣೆ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಡ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಂದ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿ ಹತ್ತು ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಸದುಪಯೋಗವಾಗುಂತೆ ನಿಲಯ ಪಾಲಕರು ಸೂಕ್ತ ನಿರ್ವಹಣೆ ಮಾಡದ ಕಾರಣ ಈ ರೀತಿಯ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿ ನಿಲಯದಲ್ಲಿ ಎಷ್ಟು ಮಕ್ಕಳಿದ್ದಾರೆ, ನಿಲಯಕ್ಕೆ ನೀಡಿರುವ ಸೌಲಭ್ಯಗಳ ಬಗ್ಗೆ ಸೂಕ್ತವಾದ ದಾಖಲೆಗಳ ಪರಿಶೀಲನೆ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಮಮತಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಮ್ಮ ಅಳಲನ್ನು ತೋಡಿಕೊಂಡರು. ನಿಲಯ ಪಾಲಕರು ಇಲ್ಲಿಗೆ ಬಂದು ನಮ್ಮ ಸಮಸ್ಯೆಗಳನ್ನು ಕೇಳುವುದಿಲ್ಲ. ವಿದ್ಯಾರ್ಥಿಗಳ ಬೇಡಿಕೆಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆ ಕೆಟ್ಟು ಎರಡು ತಿಂಗಳಿಂದ ಹಾಜರಾತಿ ಹಾಕಿಲ್ಲ, ಪ್ರತಿ ತಿಂಗಳು ನೀಡುವ ಸೌಲಭ್ಯಗಳನ್ನು ಕೇಳಿದರೆ ಅರ್ಜಿ ಬರೆದು ಕೊಡಿ ಎಂದು ಉಡಾಫೆ ಉತ್ತರಗಳನ್ನು ನೀಡುತ್ತಾರೆ. ಅನೇಕ ಸಮಸ್ಯೆಗಳ ಸುಳಿಯಲ್ಲಿ ನಾವು ವಿಧಾಭ್ಯಾಸ ನಡೆಸುತ್ತಿದ್ದೇವೆ, ಈ ಹಿಂದೆ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿಯ ಸಮಸ್ಯೆಗಳನ್ನು ಕಂಡು ಹಾಸ್ಟೆಲ್ ತೊರೆದು ಕಷ್ಟವಾದರೂ ತಮ್ಮ ಊರಿನಿಂದ ತರಗತಿಗಳಿಗೆ ಬರುತ್ತಿದ್ದಾರೆ ಎಂದು ದೂರಿದರು.