ವಿವಸ್ತ್ರ ಪ್ರಕರಣ: ಬಿಜೆಪಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Jan 10, 2026, 02:30 AM IST
BJP

ಸಾರಾಂಶ

ಸುಜಾತಾಳನ್ನು ಬಂಧಿಸಲು ಬರೋಬ್ಬರಿ 40ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಹೋಗಿದ್ದರು. ಆಕೆಯೇನು ಉಗ್ರಗಾಮಿನಾ? ಕೊಲೆ ಆರೋಪಿಯಾ?. ಆದರೆ, ಪಾಲಿಕೆ ಕಾಂಗ್ರೆಸ್‌ ಸದಸ್ಯೆಯನ್ನು ಇನ್ನೋವಾ ಕಾರ್‌ನಲ್ಲಿ ಬಂಧಿಸಿ ಕರೆದುಕೊಂಡು ಬರುತ್ತೀರಿ. ಇದು ಯಾವ ನ್ಯಾಯ? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು.

ಹುಬ್ಬಳ್ಳಿ:  ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ವೇಳೆ ವಿವಸ್ತ್ರಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ, ಪ್ರತಿಭಟನಾ ಸಮೇವೇಶ ನಡೆಸಿತು. ವಿರೋಧ ಪಕ್ಷದ ನಾಯಕರಾದ ಆರ್‌. ಅಶೋಕ, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರ ಭಾವಚಿತ್ರವುಳ್ಳ ಪ್ರತಿಕೃತಿಯನ್ನು ಪ್ರತಿಭಟನಾಕಾರರು ದಹಿಸಿದರು.

ಪ್ರತಿಭಟನಾ ಸಮಾವೇಶ ನಡೆಸಿದ ಬಿಜೆಪಿ ಮುಖಂಡರು

ಇಲ್ಲಿನ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಜಮೆಯಾಗಿ ಪ್ರತಿಭಟನಾ ಸಮಾವೇಶ ನಡೆಸಿದ ಬಿಜೆಪಿ ಮುಖಂಡರು, ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲಿಂದ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಸಿಎಂ, ಡಿಸಿಎಂ, ಸಚಿವರಾದ ಎಚ್‌.ಕೆ. ಪಾಟೀಲ, ಸಂತೋಷ ಲಾಡ್‌, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ 11 ಜನ ಸಚಿವರ ಭಾವಚಿತ್ರವುಳ್ಳ ಪ್ರತಿಕೃತಿ ತಯಾರಿಸಿ ಅದರ ಮುಂದೆ ಬೊಬ್ಬೆ ಹಾಕಿದರಲ್ಲದೇ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಆ ಪ್ರತಿಕೃತಿಯನ್ನು ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ದಹಿಸಿದರು. ಅಲ್ಲಿಂದ ಮೆರವಣಿಗೆ ಮೂಲಕ ತಹಸೀಲ್ದಾರ್‌ ಕಚೇರಿ ಎದುರಿಗೆ ಆಗಮಿಸಿದ ಕಾರ್ಯಕರ್ತರು, ಅಲ್ಲಿ ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಕೆಲ ಕಾಲ ರಸ್ತೆ ಬಂದ್‌ ಮಾಡಿದರು. ಈ ವೇಳೆ ಆ ಬೆಂಕಿ ಸುತ್ತಲೂ ಕುಣಿಯುತ್ತಾ ಬೊಬ್ಬೆ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ನೀರು ತಂದು ಬೆಂಕಿ ನಂದಿಸಿದರು.

ಸತ್ಯಾಂಶ ಹೊರಬರಬೇಕು

ಇದಕ್ಕೂ ಮುನ್ನ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ, ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ಸತ್ಯಾಂಶ ಹೊರಬರಬೇಕು. ಬಿಎಲ್‌ಒ ಜತೆಗೆ ಓರ್ವರು ಹೋಗಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಸುಜಾತಾ ಮತ್ತು ಆಕೆಯ ಸಹೋದರ ಹೋಗಿದ್ದು ಅಷ್ಟೇ ಎಂದರು.

ಸುಜಾತಾಳನ್ನು ಬಂಧಿಸಲು ಬರೋಬ್ಬರಿ 40ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಹೋಗಿದ್ದರು. ಆಕೆಯೇನು ಉಗ್ರಗಾಮಿನಾ? ಕೊಲೆ ಆರೋಪಿಯಾ? ಎಂದು ಪ್ರಶ್ನಿಸಿದರು. ಆದರೆ, ಪಾಲಿಕೆ ಕಾಂಗ್ರೆಸ್‌ ಸದಸ್ಯೆಯನ್ನು ಇನ್ನೋವಾ ಕಾರ್‌ನಲ್ಲಿ ಬಂಧಿಸಿ ಕರೆದುಕೊಂಡು ಬರುತ್ತೀರಿ. ಇದು ಯಾವ ನ್ಯಾಯ? ಕಾಂಗ್ರೆಸ್ಸಿನ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಪಿಐ, ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಬದುಕಿದೆಯಾ, ಸತ್ತಿದಿಯೋ ಎಂಬುದೇ ತಿಳಿಯುತ್ತಿಲ್ಲ. ಮರ್ಯಾದಾ ಹತ್ಯೆ, ದಲಿತ ಯುವತಿ ಕೊಲೆ, ಜನಾರ್ದನ ರೆಡ್ಡಿ ಹತ್ಯೆಗೆ ಯತ್ನ, ಇವನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲೀಸರನ್ನು ಪ್ರೀಯಾಗಿ ಬಿಡಿ. ಅವರು ಸಮರ್ಪಕವಾಗಿ ನಿಭಾಯಿಸುತ್ತಾರೆ. ನೀವು ಕಂಟ್ರೋಲ್‌ ಮಾಡಲು ಹೋಗಿ ಸಮಸ್ಯೆ ಮಾಡುತ್ತಿದ್ದೀರಿ ಎಂದರು.ನಾವು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಕ್ಕೆ 3 ವರ್ಷದ ಹಿಂದಿನ ವಿಡಿಯೋ ಇದೀಗ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ಸಿನಲ್ಲಿ ಮಹಿಳೆಯರು ಸೇಫ್‌ ಅಲ್ಲ. ಅಲ್ಲಿ ಮಹಿಳೆಯರ ವಿಡಿಯೋ ಮಾಡಿಟ್ಟುಕೊಂಡು ನಂತರ ಬಿಡುಗಡೆ ಮಾಡಿ ಪಾರ್ಟಿ ಬಿಟ್ಟಾಗ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಕಾಂಗ್ರೆಸ್ಸಿನಲ್ಲಿ ಇದ್ದಾಗಲೇ ವಿಡಿಯೋ ಬಿಡುಗಡೆ ಮಾಡಬೇಕಿತ್ತು. ಆಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಶೋಕ ಕಾಟವೆ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡರ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ತಿಪ್ಪಣ್ಣ ಮಜ್ಜಗಿ, ಮುಖಂಡರಾದ ರಂಗಾ ಬದ್ದಿ, ಮಹೇಂದ್ರ ಕೌತಾಳ, ರವಿ ನಾಯ್ಕ, ಬಸವರಾಜ ಜಾಬಿನ, ಮೋಹನ ರಾಮದುರ್ಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ