ಕನ್ನಡಪ್ರಭ ವಾರ್ತೆ ಮಂಡ್ಯ
ಉದ್ಯೋಗ ಖಾತ್ರಿಯಡಿ ಕೆಲಸ, ನಿರುದ್ಯೋಗ ಭತ್ಯೆ, ಸ್ಮಶಾನ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
ಮಳವಳ್ಳಿ, ಕೆ.ಆರ್.ಪೇಟೆ, ಮದ್ದೂರು ತಾಲೂಕುಗಳಲ್ಲಿ ಕೆಲಸ ನೀಡಿರುವ ಗ್ರಾಮ ಪಂಚಾಯಿತಿಗಳಲ್ಲಿ ಇಂದಿನಿಂದ ಕನಿಷ್ಠ ಒಂದೂವರೆ ತಿಂಗಳಾದರೂ ಕೆಲಸ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಕೂಲಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಕಡಿತ ಮಾಡಿರುವ ಸಲಕರಣೆ ವೆಚ್ಚವನ್ನು ಪುನರ್ ಪ್ರಾರಂಭಿಸಬೇಕು. ಇಲ್ಲವಾದರೆ ಸಲಕರಣೆಗಳನ್ನು ಪಂಚಾಯಿತಿಗಳಿಂದಲೇ ಸರಬರಾಜು ಮಾಡಬೇಕು. ನಾಮಫಲಕ ಹಾಕಿರುವ ಸ್ಥಳದಲ್ಲಿ ಫೋಟೋ ತೆಗೆಯುವುದನ್ನು ಕೈಬಿಟ್ಟು ಕಾಮಗಾರಿ ನಿರ್ವಹಿಸುವ ಸ್ಥಳದಲ್ಲಿ ಫೋಟೋ ತೆಗೆಯಬೇಕು. ನಾಮಫಲಕವನ್ನು ಪಂಚಾಯಿತಿಯಿಂದಲೇ ಹಾಕಬೇಕು. ಕಾಯಕಬಂಧುಗಳಿಂದ ಅಳವಡಿಸಿರುವ ನಾಮಫಲಕದ ವೆಚ್ಚವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 30 ವರ್ಷಗಳಿಂದ ಬಡವರಿಗೆ ನಿವೇಶನ ನೀಡಿಲ್ಲ, ಪಂಚಾಯಿತಿಗಳಿಗೆ ಅರ್ಜಿ ಕೊಡುತ್ತಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ನೂರಾರು ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಇರುವ ಸ್ಮಶಾನ ಸ್ಥಳವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಶವಸಂಸ್ಕಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ಸ್ಮಶಾನ ಸ್ಥಳ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ, ಮುಖಂಡರಾದ ಬಿ.ಹನುಮೇಶ್, ಅಮಾವಸಯ್ಯ, ಟಿ.ಪಿ.ಅರುಣ್‌ಕುಮಾರ್, ಜಿ.ಎಚ್.ಗಿರೀಶ್, ಲಕ್ಷ್ಮೀ ಗೊಲ್ಲರಹಳ್ಳಿ, ಟಿ.ಎಚ್.ಆನಂದ್, ಲಕ್ಷ್ಮೀ ಕುಂತೂರು, ಅಬ್ದುಲ್ಲಾ, ಸರೋಜಮ್ಮ, ಬಸವರಾಜು, ಗೋಪಾಲ್, ಸುರೇಂದ್ರ ಭಾಗವಹಿಸಿದ್ದರು.
ಸಿಇಒ ಕ್ಷಮೆಗೆ ಪಟ್ಟು, ಆಹೋರಾತ್ರಿ ಧರಣಿ ಎಚ್ಚರಿಕೆ:ಸ್ಥಳಕ್ಕೆ ಬಂದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಪ್ರತಿಭಟನಾಕಾರರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ, ನಾವು ಎಷ್ಟೋ ಸಿಇಒಗಳನ್ನು ನೋಡಿದ್ದೇವೆ, ಪೊಲೀಸರ ಸಮ್ಮುಖದಲ್ಲಿಯೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಮಾತನ್ನಾಡಿರುವ ಇವರು ನಮ್ಮೆಲ್ಲರ ಕ್ಷಮೆ ಕೇಳುವವರೆಗೂ ನಾವು ಜಗ್ಗುವುದಿಲ್ಲ, ಪ್ರತಿಭಟನೆಯನ್ನು ಆಹೋರಾತ್ರಿ ಮುಂದುವರಿಸುವುದಾಗಿ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಎಚ್ಚರಿಕೆ ನೀಡಿದರು.