ನಗರಸಭೆಯ ಸಾರ್ವಜನಿಕ ಹರಾಜಿಗೆ ನೀರಸ ಪ್ರತಿಕ್ರಿಯೆ

KannadaprabhaNewsNetwork |  
Published : Feb 18, 2026, 01:30 AM IST
ಪೋಟೋ೧೭ಸಿಎಲ್‌ಕೆ೧ ಚಳ್ಳಕೆರೆ ನಗರದ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖಾಸಗಿಬಸ್‌ಗಳ ಸುಂಕ ವಸೂಲಾತಿಗೆವಿರೋಧ ವ್ಯಕ್ತಪಡಿಸಿದರು.  | Kannada Prabha

ಸಾರಾಂಶ

ಚಳ್ಳಕೆರೆ ನಗರದ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖಾಸಗಿ ಬಸ್‌ಗಳ ಸುಂಕ ವಸೂಲಾತಿಗೆ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿ ವರ್ಷದಂತೆ ಈ ವರ್ಷವೂ ನಗರಸಭೆ ದಿನವಹಿ, ವಾರದ, ಖಾಸಗಿ ಬಸ್ಟಾಂಡ್ ಮತ್ತು ದ್ವಿಚಕ್ರ ವಾಹನ ನಿಲುಗಡೆ ಸುಂಕವಸೂಲಿಗೆ ಕುರಿತಂತೆ ಮಂಗಳವಾರ ನಗರಸಭೆ ಕಾರ್ಯಾಲಯದಲ್ಲಿ ಹರಾಜು ಪ್ರಕ್ರಿಯೆಯನ್ನು ನಗರಸಭೆ ಆಯುಕ್ತೆ ಡಾ.ನಾಗವೇಣಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಳೆದ ಜನವರಿ 21ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಫೆ.17ರ ಮಂಗಳವಾರ ಹರಾಜು ಪ್ರಕ್ರಿಯೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲೇ ಪೌರಾಯುಕ್ತೆ ಡಾ.ನಾಗವೇಣಿ ಮಾಹಿತಿ ನೀಡಿ, ನಗರಸಭೆ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ನಗರಸಭೆಯ ಆರ್ಥಿಕ ಸುಧಾರಣೆಗೆ ಹರಾಜಿನಿಂದ ಬರುವ ಆದಾಯವನ್ನು ವ್ಯಯ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಹಾಗೂ ಸೌಲಭ್ಯವನ್ನು ನಗರಸಭೆ ಆಡಳಿತ ನೀಡಲಿದೆ. ಈ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಂಡು ನಗರಸಭೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಕೈಜೋಡಿಸಬೇಕೆಂದರು.

ಪ್ರಾರಂಭದಲ್ಲಿ ದಿನವಹಿ ಸಂತೆ ವಸೂಲಾತಿ ಕುರಿತಂತೆ ಹರಾಜು ಪ್ರಕ್ರಿಯೆ ನಡೆಯಿತು. ಇಂದಿರಾ ತರಕಾರಿ ಮಾರುಕಟ್ಟೆ ಹಾಗೂ ಇತರೆಡೆ ಬರುವ ವಸ್ತುಗಳಿಗೆ ನಿತ್ಯ ವಸೂಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಸುಮಾರು ಐದಕ್ಕೂ ಹೆಚ್ಚು ಬಿಡ್‌ದಾರರು ಭಾಗವಹಿಸಿದ್ದರು. ಅಂತಿಮವಾಗಿ ನಗರದ ಚಿತ್ರಯ್ಯನಹಟ್ಟಿಯ ಸುರೇಶ್‌ರವರು 15.05 ಲಕ್ಷಕ್ಕೆ ಹರಾಜು ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಯಿತು. 2024-25 ಸಾಲಿನಲ್ಲಿ 5.50ಲಕ್ಷಕ್ಕೆ ಹರಾಜ ನಡೆದಿತ್ತಿತ್ತು. ಈ ಬಾರಿ 15ಲಕ್ಷಕ್ಕೆ ಹರಾಜು ನಡೆದಿದ್ದು ಒಟ್ಟು 10 ಲಕ್ಷಕ್ಕೂ ಹೆಚ್ಚು ಲಾಭ ನಗರಸಭೆಗೆ ಬರಲಿದೆ. ವಾರದ ಸಂತೆ ವಸೂಲಾತಿ ಪ್ರಕ್ರಿಯೆ ಆರಂಭಗೊಂಡು ಅಂತಿಮವಾಗಿ ಗೋವಿಂದ ರಾಜುರವರಿಗೆ 10.65 ಲಕ್ಷಕ್ಕೆ ಹರಾಜಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನಲಾಭಗಳಿಸಲು ಸಾಧ್ಯವಾಗಿದೆ.

ನಗರದ ಖಾಸಗಿ ಬಸ್ಟಾಂಡ್ ಹರಾಜು ಪ್ರಕ್ರಿಯೆಗೆ ತಿಪ್ಪೇಸ್ವಾಮಿ, ವೆಂಕಟೇಶ್, ಗಿರೀಶ್, ಮೂರ್ತಿ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದರು. ಕಾರಣ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ನೆರಳು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ನಗರಸಭೆ ಆಡಳಿತ ಮುಂದಾಗಿಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ಖಾಸಗಿ ಬಸ್ಟಾಂಡ್‌ನ್ನು ನಿರ್ಮಾಣಮಾಡಲಾಗಿದ್ದರೂ ಇದುವರೆಗೂ ಮೂಲಭೂತ ಸೌಕರ್ಯವಿಲ್ಲದೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಆದ್ದರಿಂದ ನಗರಸಭೆ ಆಡಳಿತ ವ್ಯವಸ್ಥೆಯನ್ನು ಕಲ್ಪಿಸಿದ ನಂತರ ಸಾರ್ವಜನಿಕವಾಗಿ ಹರಾಜು ಮಾಡಿ ಎಂದು ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು. ಖಾಸಗಿ ಬಸ್ ನಿಲ್ದಾಣದ ದ್ವಿಚಕ್ರವಾಹನ ನಿಲುಗಡೆ ಸುಂಕ ವಸೂಲಾತಿಗಾಗಿ ಚರ್ಚೆ ನಡೆದಿದ್ದು, ಯಾರೂ ಸಹ ಬಿಡ್‌ನಲ್ಲಿ ಭಾಗವಹಿಸದೆ ಇರುವುದರಿಂದ ಹರಾಜನ್ನು ಮುಂದೂಡಲಾಯಿತು.

ಕಂದಾಯಾಧಿಕಾರಿ ಸತೀಶ್, ಗುರುಮೂರ್ತಿ, ಈ.ತಿಪ್ಪೇಸ್ವಾಮಿ, ಚೇತನ್, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆ, ಶಿಕ್ಷಣದಲ್ಲಿ ಮಳವಳ್ಳಿ ವಿಶಿಷ್ಟ ಛಾಪು: ದೊಡ್ಡಯ್ಯ
ಕಾಡಾನೆ ತುಳಿದು ಬಾಳೆ, ತೆಂಗು, ಅಡಿಕೆ ನಾಶ